Crime
ತಾಯಿಗೆ ಸೆಲ್ಫಿ ವೀಡಿಯೋ ಕಳಿಸಿ ದುಬೈನಲ್ಲಿ ಯುವಕ ಆತ್ಮಹತ್ಯೆ

– ವೀಡಿಯೋದಲ್ಲಿ ಯುವಕ ಹೇಳಿದ್ದೇನು..?
ಹೈದರಾಬಾದ್: ದುಬೈನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ತನ್ನ ತಾಯಿಗೆ ಸೆಲ್ಫಿ ವೀಡಿಯೋ ಮಾಡಿ ಬಳಿಕ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಮನಲಾ ರಾಜೇಶ್(24) ಎಂದು ಗುರುತಿಸಲಾಗಿದೆ. ಈತ ತೆಲಂಗಾಣದ ಜಗಿತ್ತಲ ಜಿಲ್ಲೆಯ ಗೊಲ್ಲಪೆಲ್ಲಿ ಮಂಡಲದ ಲಕ್ಷ್ಮೀಪುರ ಗ್ರಾಮದ ನಿವಾಸಿ. ಈತ ತನ್ನ ತಾಯಿಗೆ ಸೆಲ್ಫೀ ವೀಡಿಯೋ ಮಾಡಿ ಕಳುಹಿಸಿದ್ದಾನೆ. ಅದರಲ್ಲಿ ಪ್ರೇಯಸಿ ಇಲ್ಲದ ಜೀವನ ವ್ಯರ್ಥ ಎಂದು ತನ್ನ ನೋವನ್ನು ಹೊರಹಾಕಿದ್ದಾನೆ.
ಜಗಿತ್ತಲ ಜಿಲ್ಲೆಯ ಗೋವಿಂದಪಲ್ಲಿ ಗ್ರಾಮದ ಯುವತಿಯನ್ನು ರಾಜೇಶ್ ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದ. ಆಕೆಯೂ ಸಹ ರಾಜೇಶ್ ನನ್ನು ತುಂಬಾನೇ ಇಷ್ಟಪಡುತ್ತಿದ್ದಳು. ಆದರೆ ಈ ಮಧ್ಯೆ ರಾಜೇಶ್ ಕೆಲಸಕ್ಕೆಂದು ದುಬೈಗೆ ತೆರಳಿದ್ದ. ಅಲ್ಲದೆ ದುಬೈನಿಂದ ಬಂದ ಬಳಿಕ ಇಬ್ಬರು ಮದುವೆ ಮಾಡಿಕೊಳ್ಳುವ ನಿರ್ಧಾರ ಮಾಡಿದರು.
ಇತ್ತ ಮಗಳ ಪ್ರೀತಿಯ ವಿಚಾರ ಆಕೆಯ ಪೋಷಕರ ಗಮನಕ್ಕೆ ಬಂದಿದೆ. ಹೀಗಾಗಿ ಪ್ರೀತಿಗೆ ಒಪ್ಪದ ಪೋಷಕರು ಆಕೆಗೆ ಬೇರೆಯೊಬ್ಬನ ಜೊತೆ ಮದುವೆ ಮಾಡಲು ನಿರ್ಧರಿಸಿದ್ದರು. ಅದಕ್ಕಾಗಿ ವರನ ಹುಡುಕಾಟ ಆರಂಭಿಸಿದ್ದಾರೆ. ರಾಜೇಶ್ ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಲು ಯುವತಿಗೆ ಒಪ್ಪಿಗೆ ಇಲ್ಲ. ಹೀಗಾಗಿ ತಂದೆ-ತಾಯಿಯ ನಿರ್ಧಾರದಿಂದ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತನ್ನ ಪ್ರಿಯತಮೆ ಸೂಸೈಡ ಮಾಡಿಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆಯೇ ರಾಜೇಶ್ ಕೂಡ ದುಬೈನಲ್ಲಿ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೂ ಮುನ್ನ ಈತ, ಪ್ರಿಯತಮೆ ಇಲ್ಲದ ಜೀವನ ವ್ಯರ್ಥ ಎಂದು ಸೆಲ್ಫಿ ವೀಡಿಯೋ ಮಾಡಿ ಅದನ್ನು ತನ್ನ ತಾಯಿಗೆ ಕಳುಹಿಸಿದ್ದಾನೆ. ಮಗ ರಾಜೇಶ್ ಸಾವಿನ ಸುದ್ದಿ ಕೇಳಿ ಆತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.
