Connect with us

Crime

14ರ ಬಾಲೆಯ ಮದ್ವೆಗೆ ಪೋಷಕರು ವಿರೋಧ- ಬಾಲಕಿಯ ತಮ್ಮನನ್ನೇ ಕೊಲೆಗೈದ ಪಾಪಿ

Published

on

ಲಕ್ನೋ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

ಆರೋಪಿಯನ್ನು ಬಾಬು ಎಂದು ಗುರುತಿಸಲಾಗಿದ್ದು, ಈತ 8 ವರ್ಷದ ಬಾಲಕನನ್ನು ಕೊಲೆಗೈದಿದ್ದಾನೆ. ಈ ಘಟನೆ ಕಳೆದ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಡೆದಿದ್ದೇನು?:
24 ವರ್ಷದ ಯುವಕ 14 ವರ್ಷದ ಬಾಲಕಿಯನ್ನು ಮದುವೆಯಾಗಲು ಯತ್ನಿಸಿದ್ದಾನೆ. ಆದರೆ ಈ ಮದುವೆಗೆ ಬಾಲಕಿಯ ಪೋಷಕರು ಒಪ್ಪಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆರೋಪಿ 8 ವರ್ಷದ ಬಾಲಕನನ್ನು ಬೇರೆಡೆ ಕರೆದೊಯ್ದು ಕೊಲೆ ಮಾಡಿದ್ದಾನೆ.

ಬಾಲಕ ತನ್ನ ಕುಟುಂಬದೊಂದಿಗೆ ನೊಯ್ಡಾ ಸೆಕ್ಟರ್ 44ರ ಗ್ರಾಮವೊಂದರಲ್ಲಿ ವಾಸವಾಗಿದ್ದನು. ಇತ್ತ ಆರೋಪಿ ಬಾಬು ಅದೇ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದನು. ಇದ್ದಕ್ಕಿಂದ್ದಂತೆ 8 ವರ್ಷದ ಬಾಲಕ ಬುಧವಾರ ನಾಪತ್ತೆಯಾಗಿದ್ದನು. ರಾತ್ರಿಯಾದರೂ ಮಗ ಮನೆಗೆ ವಾಪಸ್ ಬರದಿದ್ದಾಗ ಹುಡುಕಾಟ ಆರಂಭಿಸಿದ್ದಾರೆ. ಇತ್ತ ಬಾಲಕನ ತಾಯಿ ಕೊನೆಯ ಬಾರಿ ಆತನನ್ನು ಬಾಬು ಜೊತೆ ನೋಡಿದ್ದರು. ಹೀಗಾಗಿ ಅವರು ಆತನ ಮನೆಗೆ ಹೋದಾಗ ಅಲ್ಲಿ ಬಾಬುನೇ ಇರಲಿಲ್ಲ.

ಇತ್ತ ಇಡೀ ದಿನ ಹುಡುಕಾಟ ನಡೆಸಿದರೂ ಮಗ ಸಿಗದಿದ್ದರಿಂದ ಕೊನೆಗೆ ಬಾಲಕನ ಕುಟುಂಬ ಗುರುವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿತ್ತು. ಅಂತೆಯೇ ಮಧ್ಯಾಹ್ನದ ಬಳಿಕ ಪೊಲೀಸರು ಮಹಮಯ ಫ್ಲೈ ಓವರ್ ಸೆಕ್ಟರ್ 37 ಮಾರ್ಗದ ಬದಿಯ ಕಂದಕದಲ್ಲಿ ಪುಟ್ಟ ಹುಡುಗನ ಮೃತದೇಹ ಇರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಬಾಲಕನ ತಾಯಿ ಸ್ಥಳಕ್ಕೆ ತೆರಳಿ ಪತ್ತೆ ಹಚ್ಚಿದ್ದಾರೆ.

ಹಲವು ಸಮಯಗಳಿಂದ ನನ್ನ 14 ವರ್ಷದ ಮಗಳಿಗೆ ಬಾಬು ಕಿರುಕುಳ ನೀಡುತ್ತಿದ್ದಾನೆ. ಅವನು ಆಕೆಯನ್ನು ಮದುವೆಯಾಗುತ್ತೇನೆ ಎಂದು ಒತ್ತಾಯಿಸುತ್ತಿದ್ದನು. ಆದರೆ ಆತನ ಮಾತಿಗೆ ನಾವು ಸೊಪ್ಪು ಹಾಕುತ್ತಿಲ್ಲ. ಯಾವಾಗ ನಾವು ಮದುವೆಗೆ ಒಪ್ಪಲಿಲ್ಲವೋ ಆವತ್ತಿಂದ ಆತ ನಮ್ಮ ಮನೆಗೆ ಕೇಡು ಬಯಸುತ್ತಿದ್ದಾನೆ. ಅಲ್ಲದೆ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು ಎಂದು ಮೃತ ಬಾಲಕನ ತಾಯಿ ದೂರಿದ್ದಾರೆ.

ಅಪ್ರಾಪ್ತಳನ್ನು ಮದುವೆಯಾಗಲು ಒಪ್ಪಿಗೆ ಸೂಚಿಸದ ಸಿಟ್ಟಿನಿಂದಲೇ ಆರೋಪಿ ಬಾಲಕನನ್ನು ಕೊಲೆ ಮಾಡಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *