Tuesday, 18th June 2019

ಟಿಕ್‍ಟಾಕ್ ಮಾಡಲು ಹೋಗಿ ಗೆಳೆಯನಿಗೆ ಶೂಟ್

ಸಲ್ಮಾನ್

ನವದೆಹಲಿ: ಟಿಕ್‍ಟಾಕ್ ಮಾಡಲು ಹೋಗಿ ಸ್ನೇಹಿತನೊಬ್ಬ ತನ್ನ 19 ವರ್ಷದ ಗೆಳೆಯನಿಗೆ ಶೂಟ್ ಮಾಡಿದ್ದು, ಪರಿಣಾಮ ಯುವಕ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.

ಸಲ್ಮಾನ್(19) ಮೃತ ದುರ್ದೈವಿ. ಕೇಂದ್ರ ದೆಹಲಿಯ ಬಾರಾಖಂಬಾ ರಸ್ತೆಯಲ್ಲಿರುವ ರಂಜಿತ್ ಸಿಂಗ್ ಫ್ಲೈಓವರ್ ಬಳಿ ಈ ಘಟನೆ ಸಂಭವಿಸಿದೆ. ಟಿಕ್‍ಟಾಕ್ ವಿಡಿಯೋ ಮಾಡಲು ಪಿಸ್ತೂಲ್‍ನಿಂದ ಶೂಟ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ?
ಭಾನುವಾರ ರಾತ್ರಿ ಸಲ್ಮಾನ್ ತಮ್ಮ ಸ್ನೇಹಿತರಾದ ಸೊಹೈಲ್ ಮತ್ತು ಅಮೀರ್ ಅವರೊಂದಿಗೆ ಭಾರತ ಗೇಟ್ ಬಳಿ ಕಾರಿನಲ್ಲಿ ಹೋಗಿದ್ದಾರೆ. ಅಲ್ಲಿಂದ ಹಿಂದಿರುಗುತ್ತಿದ್ದಾಗ ಸೊಹೈಲ್, ಸಲ್ಮಾನ್ ಪಕ್ಕ ಕುಳಿತುಕೊಂಡಿದ್ದನು. ಸಲ್ಮಾನ್ ಕಾರು ಓಡಿಸುತ್ತಿದ್ದನು. ನಂತರ ಸೊಹೈಲ್ ಪಿಸ್ತೂಲ್ ಹೊರತೆಗೆದು ಮೊಬೈಲ್‍ನಲ್ಲಿ ಟಿಕ್‍ಟಾಕ್ ವಿಡಿಯೋ ಮಾಡುತ್ತಿದ್ದನು. ಆಗ ಸೊಹೈಲ್ ಪಿಸ್ತೂಲ್‍ನನ್ನು ಸಲ್ಮಾನ್‍ಗೆ ಗುರಿಯಾಗಿಟ್ಟುಕೊಂಡಿದ್ದನು. ಈ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಸಲ್ಮಾನ್ ಎಡ ಕೆನ್ನೆಯ ಮೇಲೆ ಗುಂಡು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ನಂತರ ಇಬ್ಬರು ಸ್ನೇಹಿತರು ಭಯಭೀತರಾಗಿದ್ದು, ಡ್ಯಾರಿಯಾಗನ್ಜ್ ನಲ್ಲಿದ್ದ ಸೊಹೈಲ್ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಅಲ್ಲಿ ತಮ್ಮ ರಕ್ತಮಯವಾದ ಬಟ್ಟೆಗಳನ್ನು ಬದಲಾಯಿಸಿಕೊಂಡಿದ್ದಾರೆ. ನಂತರ ಸಂಬಂಧಿಯ ಜೊತೆಗೆ ಸಲ್ಮಾನ್‍ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಸಲ್ಮಾನ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆಗೆ ಬಂದು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಅಮೀರ್, ಸೊಹೈಲ್ ಮತ್ತು ಇನ್ನೊಬ್ಬ ಶರೀಫ್ ಮೂವರನ್ನು ಬಂಧಿಸಲಾಗಿದೆ. ಸದ್ಯಕ್ಕೆ ಸಲ್ಮಾನ್ ದೇಹವನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ. ಗುಂಡು ಆಕಸ್ಮಿಕವಾಗಿ ಹಾರಿತೆ ಅಥವಾ ಕೊಲ್ಲುವ ಉದ್ದೇಶದಿಂದ ಶೂಟ್ ಮಾಡಲಾಗಿದೆಯೇ ಎಂದು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಲ್ಮಾನ್ ಜೊತೆ ಇಬ್ಬರು ಸ್ನೇಹಿತರು ಭಾನುವಾರ ರಾತ್ರಿ ಇಂಡಿಯಾ ಗೇಟ್‍ಗೆ ಹೋಗಬೇಕೆಂದು ಕಾರನ್ನು ತೆಗೆದುಕೊಂಡು ಹೋಗಿದ್ದರು ಎಂದು ಸಲ್ಮಾನ್ ಸಂಬಂಧಿ ತಿಳಿಸಿದ್ದಾರೆ. ಮೃತ ಸಲ್ಮಾನ್ ಒಬ್ಬ ಪದವಿ ವಿದ್ಯಾರ್ಥಿಯಾಗಿದ್ದು, ಈತನಿಗೆ ಸೋದರ ಮತ್ತು ಸಹೋದರಿ ಇದ್ದಾರೆ. ನ್ಯೂ ಜಾಫ್ರಾಬಾದ್ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಈತನ ತಂದೆ ವ್ಯವಹಾರ ನಡೆಸುತ್ತಿದ್ದು, ತಂದೆಗೆ ಸಹಾಯ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *