Saturday, 16th February 2019

68 ಸೆಕೆಂಡ್‍ನಲ್ಲಿ 50 ಮೆಣಸಿನಕಾಯಿ ತಿಂದ ಚೀನಾದ ಶೂರ!

ಬೀಜಿಂಗ್: ಚೀನಾದಲ್ಲಿ ನಡೆದ ಮೆಣಸಿನಕಾಯಿ ತಿನ್ನುವ ಸ್ಪರ್ಧೆಯಲ್ಲಿ ಯುವಕನೊಬ್ಬ ಒಂದು ನಿಮಿಷದಲ್ಲಿ ಸುಮಾರು 50 ಮೆಣಸಿನಕಾಯಿ ತಿಂದು ಗೆಲುವನ್ನು ಸಾಧಿಸಿದ್ದಾನೆ.

ಟ್ಯಾಂಗ್ ಶುಯಿಹುಯಿ ಸ್ಪರ್ಧೆ ಗೆದ್ದ ಸ್ಥಳೀಯ ಯುವಕ. ನಿಂಗ್ಕ್ಸಿಯಾಂಗ್‍ನ ಕೌಂಟೀಯ ಸ್ಥಳೀಯ ಉದ್ಯಾನವನದಲ್ಲಿ ನಡೆದ ಎರಡನೇ ವರ್ಷದ ವಾರ್ಷಿಕ ಕಾರ್ಯಕ್ರಮದಲ್ಲಿ ಮೆಣಸು ತಿನ್ನುವ ಸ್ಪರ್ಧೆಯಲ್ಲಿ ಗೆದ್ದು ಟ್ಯಾಂಗ್ 3 ಗ್ರಾಂ ಚಿನ್ನದ ನಾಣ್ಯವನ್ನು ತನ್ನದಾಗಿಸಿಕೊಂಡನು.

ಸ್ಪರ್ಧೆಯನ್ನು ವೈದ್ಯರ ಸಮ್ಮುಖದಲ್ಲಿ, ಪ್ರತಿ ಸ್ಪರ್ಧಿಗಳಿಗೆ ತಲಾ 50 ಟಬಾಸ್ಕೋ ಮೆಣಸಿನಕಾಯಿಗಳನ್ನು ಪ್ಲೇಟ್‍ನಲ್ಲಿ ಕೊಟ್ಟಿದ್ದರು. ಯಾರು ಮೊದಲು ಎಲ್ಲವನ್ನು ತಿಂದು ಮುಗಿಸುತ್ತಾರೋ ಅವರು ಜಯಶಾಲಿಯಾಗುತ್ತಾರೆ ಎಂದು ಘೋಷಿಸಲಾಗಿತ್ತು.

ಬರೋಬ್ಬರಿ ಮೂರು ಟನ್‍ಗಳಷ್ಟು ತೇಲುತ್ತಿದ್ದ ಮೆಣಸಿನಕಾಯಿಗಳ ಕೊಳದಲ್ಲಿ ಸ್ಪರ್ಧಿಗಳು ಕುಳಿತು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಟ್ಯಾಂಗ್ ಕೇವಲ 68 ಸೆಕೆಂಡ್‍ಗಳಲ್ಲಿ ಪೂರ್ತಿ ಪ್ಲೇಟ್ ಕಾಲಿ ಮಾಡಿದ್ದಾನೆ.  ದಾಖಲೆಯ ವೇಗದಲ್ಲಿ ಸ್ಪರ್ಧೆಯನ್ನು ಟ್ಯಾಂಗ್ ಮುಗಿಸಿದ್ದಾನೆ ಎಂದು ತಾನ್ಹೆ ಉದ್ಯಾನವನದ ಸಿಬ್ಬಂದಿ ಸನ್ ಮಿನಿಯಾಂಗ್ ಹೇಳಿದರು.

ಮೆಣಸಿನ ಖಾರವನ್ನು ಅಳೆಯುವ ಮಾಪನವಾದ ಸ್ಕೋವಿಲ್ಲೆಯಲ್ಲಿ ಈ ಮೆಣಸಿನಕಾಯಿ 30,000- 50,000 ಹೀಟ್ ಯೂನಿಟ್ ಹೊಂದಿದೆ. ಸ್ಪರ್ಧಿಗಳಿಗೆ ತೊಂದರೆ ಆಗಬಾರದು, ಸ್ಪರ್ಧಿಗಳ ಚರ್ಮಕ್ಕೆ ಯಾವುದೇ ಹಾನಿ ಆಗಬಾರದು ಎಂದು ಕಡಿಮೆ ಗುಣಮಟ್ಟದ ಮೆಣಸುಗಳನ್ನು ಕೊಳದಲ್ಲಿ ಹಾಕಲಾಗಿತ್ತು.

ಹುನಾನ್ ಕಸೀನ್ ಮಾರುಕಟ್ಟೆಯ ಮೆಣಸಿನಕಾಯಿಗಳನ್ನು ಚೀನಾದ 8 ವಿವಿಧ ಖಾದ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಸಿಚೌನ್, ಕ್ಯಾಂಟೋನಿಸ್ ಸೇರಿದಂತೆ ಹಲವು ಆಹಾರ ಖಾದ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಈ ಮೆಣಸಿನಕಾಯಿಗಳು ಗುಣಮಟ್ಟತೆಯನ್ನು ಹೊಂದುವದರ ಜೊತೆಗೆ ಬಣ್ಣವನ್ನು ಸಹ ಹೊಂದಿರುತ್ತವೆ.

ಈ ಉತ್ಸವವು ಆಗಸ್ಟ್ ತಿಂಗಳ ಅಂತ್ಯದವರೆಗೂ ನಡೆಯಲಿದ್ದು, ಪ್ರತಿ ದಿನವು ಮೆಣಸಿನಕಾಯಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗುತ್ತದೆ.

Leave a Reply

Your email address will not be published. Required fields are marked *