Latest
ಮಧ್ಯರಾತ್ರಿ ಮರ ಕಡಿದವನಿಗೆ ಬಿತ್ತು 62,075 ರೂ. ದಂಡ

ಹೈದರಾಬಾದ್: ತನ್ನ ಹೊಸ ಮನೆಯ ಪಕ್ಕದಲ್ಲೇ ಇದ್ದ ಬೇವಿನ ಮರವನ್ನು ಮಧ್ಯರಾತ್ರಿ ಕಡಿದ ವ್ಯಕ್ತಿಗೆ ಅರಣ್ಯ ಇಲಾಖೆ 62,075 ರೂಪಾಯಿ ದಂಡ ವಿಧಿಸಿರುವ ಘಟನೆ ಸೈದಾಬಾದ್ನಲ್ಲಿ ಬೆಳಕಿಗೆ ಬಂದಿದೆ.
ಮರ ಕಡಿದ ವ್ಯಕ್ತಿಯನ್ನು ಜಿ.ಸಂತೋಷ್ ರೆಡ್ಡಿಯೆಂದು ಗುರುತಿಸಲಾಗಿದೆ. ರೆಡ್ಡಿ ಹೊಸ ಮನೆಯನ್ನು ಕಟ್ಟುತ್ತಿದ್ದು, ಈ ಮನೆಗೆ ಈ ಮರ ಅಡ್ಡವಾಗುವ ಕಾರಣದಿಂದಾಗಿ ಮಧ್ಯರಾತ್ರಿ ವೇಳೆ ಕಡಿದು ಇಲ್ಲವಾಗಿಸಿದ್ದಾನೆ. ಮರ ಕಡಿದ ವಿಷಯ ತಿಳಿದ ಸ್ಥಳೀಯ 8ನೇ ತರಗತಿ ವಿದ್ಯಾರ್ಥಿಯೋರ್ವ 40 ವರ್ಷಗಳಿಂದ ಇದ್ದ ಬೇವಿನ ಮರ ಏಕಾಏಕಿ ಕಾಣೆಯಾಗಿರುವ ವಿಷಯವನ್ನು ಅರಣ್ಯ ಇಲಾಖೆಯ ಸಹಾಯವಾಣಿ ನಂಬರ್ ಗೆ ಕರೆ ಮಾಡಿ ತಿಳಿಸಿದ್ದಾನೆ.
ಕೂಡಲೇ ಸ್ಪಂದಿಸಿದ ಅರಣ್ಯಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಮರ ಕಡಿದಿರುವುದು ಸಾಬೀತಾಗಿದೆ. ರೆಡ್ಡಿ ಮರವನ್ನು ಕಡಿದು ಅದರ ರೆಂಬೆಗಳನ್ನು ಸುಟ್ಟಿರುವುದು ಕಂಡುಬಂದಿದೆ. ಹಾಗಾಗಿ ಅರಣ್ಯ ಇಲಾಖೆಯಿಂದ ರೆಡ್ಡಿಗೆ ಬಾರಿ ಮೊತ್ತದ ದಂಡ ಪ್ರಯೋಗವಾಗಿದೆ. ಪ್ರಕರಣದ ನಂತರ ಮರ ಕಡಿದ ವಿಷಯ ತಿಳಿಸಿದ ಬಾಲಕನನ್ನು ಗುರುತಿಸಿ ಅಭಿನಂದಿಸಿದೆ.
