Sunday, 21st July 2019

ತಾಕತ್ತಿದ್ದರೆ ನನ್ನ ಜೊತೆ ಸಂಸ್ಕೃತ ಶ್ಲೋಕ ಪಠಣೆ ಮಾಡಿ: ಮೋದಿ, ಶಾಗೆ ದೀದಿ ಸವಾಲ್

ಕೋಲ್ಕತ್ತಾ: ತಾಕತ್ತಿದ್ದರೆ ನನ್ನ ಜತೆಗೆ ಸಂಸ್ಕೃತ ಶ್ಲೋಕಗಳನ್ನು ಪಠಣ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಡಕ್ ಸವಾಲು ಹಾಕಿದ್ದಾರೆ.

ಅಂತಾರಾಷ್ಟ್ರೀಯ ಮಾರ್ವಾಡಿ ಫೆಡರೇಶನ್ ಆಯೋಜಿಸಿದ್ದ ಹೋಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಮತಾ ಬ್ಯಾನರ್ಜಿ, ನಾವು ಹಲವಾರು ವರ್ಷಗಳಿಂದ ದುರ್ಗಾಪೂಜೆ ಮಾಡುತ್ತಿದ್ದೇವೆ. ನವರಾತ್ರಿ, ಛತ್ ಪೂಜಾ ಮತ್ತು ಗಣಪತಿ ವಂದನಾದಂತಹ ಧಾರ್ಮಿಕ ಆಚರಣೆಗಳನ್ನು ನಾವು ಎತ್ತಿ ಹಿಡಿದಿದ್ದೇವೆ. ಆದ್ರೆ ದಿಲ್ಲಿಯಲ್ಲಿ ಕುಳಿತ ಕೆಲವರು ನಮ್ಮತ್ತ ಕೈ ತೋರಿಸುತ್ತಿದ್ದಾರೆ. ರಾಜ್ಯದಲ್ಲಿ ಪೂಜೆ ಮಾಡುವುದು ಅಪರಾಧವೆನ್ನುವ ಪರಿಸ್ಥಿತಿ ಬಂದಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದುರ್ಗಾ ಮೂರ್ತಿಗಳ ವಿಸರ್ಜನೆ ಹಾಗೂ ಶಾಲೆಗಳಲ್ಲಿ ಸರಸ್ವತಿ ಪೂಜೆಗೆ ತೃಣಮೂಲ ಕಾಂಗ್ರೆಸ್ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಬಿಜೆಪಿ ಆರೋಪಿಸಿತ್ತು. ಆದರಿಂದ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ ಬಿಜೆಪಿ ನಾಯಕರಿಗೆ ಈ ಸವಾಲು ಹಾಕಿದ್ದಾರೆ. ಬರೀ ಹಣೆಯ ಮೇಲೆ ತಿಲಕ ಇಡುವುದೇ ಧಾರ್ಮಿಕ ಶೃದ್ಧೆಯ ಸಂಕೇತವಲ್ಲ. ನನ್ನ ಜೊತೆ ಸಂಸ್ಕೃತ ಶ್ಲೋಕಗಳ ಪಠಣದ ಸ್ಪರ್ಧೆಗೆ ಬನ್ನಿ ಎಂದು ನಾನು ಅಮಿತ್‍ಬಾಬು ಮತ್ತು ನರೇಂದ್ರಬಾಬು ಅವರಿಗೆ ಆಹ್ವಾನ ನೀಡುತ್ತಿದ್ದೇನೆ. ಸಂಸ್ಕೃತ ಶ್ಲೋಕಗಳ ಬಗ್ಗೆ ಯಾರಿಗೆ ಆಳವಾದ ಜ್ಞಾನವಿದೆ ಅಂತ ನೋಡೇ ಬಿಡೋಣ ಎಂದು ದೀದಿ ಸವಾಲು ಎಸೆದಿದ್ದಾರೆ.

ನಮ್ಮ ಆಡಳಿತದಲ್ಲಿ ಸರ್ಕಾರಿ ದೇವಾಲಯಗಳು ನವೀಕರಣವಾಗಿದೆ. ದಕ್ಷೀಣೇಶ್ವರದಲ್ಲಿ ಸ್ಕೈವಾಕ್ ನಿರ್ಮಾಣವಾಗಿದೆ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಎಷ್ಟು ದೇವಾಲಯಗಳು ನಿರ್ಮಾಣವಾಗಿದೆ? ಅವರಿಗೆ ಇಂದು ರಾಮ ಮಂದಿರವನ್ನು ಕಟ್ಟಿಸಲು ಆಗಲಿಲ್ಲ. ಕೇವಲ ಚುನಾವಣಾ ಭರವಸೆಗಳನ್ನು ಮಾತ್ರ ನೀಡುತ್ತಾರೆ ಎಂದರು.

ಇತ್ತಿಚಿಗೆ ಜನರು ಭಯದಲ್ಲಿ ಬದುಕುತ್ತಿದ್ದಾರೆ. ಅವರು ತಮ್ಮ ನಾಯಕರನ್ನು ಪ್ರೀತಿಸುವ ಬದಲು, ಅವರನ್ನು ನೋಡಿ ಹೆದರುತ್ತಿದ್ದಾರೆ. ಕೇಂದ್ರೀಯ ಸಂಸ್ಥೆಗಳಾದ ಸಿಬಿಐ ಹಾಗೂ ಇಡಿ ಅಧಿಕಾರಿಗಳು ರೇಡ್ ಮಾಡುತ್ತಿದ್ದಾರೆ. ಇದರಿಂದ ಉದ್ಯಮಿಗಳು ಹೆದರುತ್ತಿದ್ದಾರೆ. ಕೆಲವು ನಾಯಕರು ತಾವು ಕೊಟ್ಟ ಭರವಸೆಯನ್ನು ಉಳಿಕೊಳ್ಳಲಿಲ್ಲ. ಆದರೇ ನಾವು ನಮ್ಮ ಮಾತನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *