Connect with us

Latest

ಅಗತ್ಯ ವಸ್ತುಗಳ ದರ ಗಗನಕ್ಕೆ- ಪ್ರಧಾನಿ ಮಧ್ಯ ಪ್ರವೇಶಕ್ಕೆ ದೀದಿ ಒತ್ತಾಯ

Published

on

ಕೋಲ್ಕತ್ತಾ: ಅಕ್ರಮ ದಾಸ್ತಾನು ನಿಯಂತ್ರಿಸಿ, ಸರಬರಾಜು ಹೆಚ್ಚಿಸಿ ಹಾಗೂ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆಯನ್ನು ತಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ತುರ್ತು ಮಧ್ಯ ಪ್ರವೇಶಿಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಅವರು, ಆಲೂಗಡ್ಡೆ ಹಾಗೂ ಈರುಳ್ಳಿ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸುವ ರಾಜ್ಯಗಳ ಅಧಿಕಾರವನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಚಾರದ ಗಂಭೀರತೆಯನ್ನು ಅರಿತು ನಾನು ಕೇಂದ್ರ ಸರ್ಕಾರದ ಮಧ್ಯ ಪ್ರವೇಶಕ್ಕೆ ಮನವಿ ಮಾಡುತ್ತಿದ್ದೇನೆ. ಅಕ್ರಮ ದಾಸ್ತಾನು ನಿಯಂತ್ರಿಸಿ, ಸರಬರಾಜು ಹೆಚ್ಚಿಸಿ ಗಗನಕ್ಕೇರಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಹಬದಿಗೆ ತರಬೇಕು. ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ನಿಯಂತ್ರಿಸಿ ಇಲ್ಲವೇ ಕೃಷಿ ಉತ್ಪನ್ನಗಳ ಉತ್ಪಾದನೆ, ಪೂರೈಕೆ, ವಿತರಣೆ ಹಾಗೂ ಮಾರಾಟ ಮಾಡುವ ರಾಜ್ಯ ಸರ್ಕಾರಗಳ ಹಕ್ಕನ್ನು ಮರು ಸ್ಥಾಪಿಸಿ ಎಂದು ಆಗ್ರಹಿಸಿದ್ದಾರೆ. ಒಟ್ಟು ನಾಲ್ಕು ಪುಟಗಳ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಮತಾ ಬ್ಯಾನರ್ಜಿ ಬರೆದಿದ್ದಾರೆ.

ಕೃಷಿ ಸರಕುಗಳ ಉತ್ಪಾದನೆ, ಪೂರೈಕೆ, ವಿತರಣೆ ಹಾಗೂ ಮಾರಾಟದ ಮೇಲೆ ತಮ್ಮ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ರೂಪಿಸಲು ರಾಜ್ಯಗಳಿಗೆ ಅನುಮತಿ ನೀಡಿ ಎಂದು ಅವರು ಒತ್ತಾಯಿಸಿದ್ದಾರೆ. ಆಲೂಗಡ್ಡೆ ಹಾಗೂ ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯುವ ಶಕ್ತಿ ರಾಜ್ಯ ಸರ್ಕಾರಗಳಿಗೆ ಇಲ್ಲವಾಗಿದೆ. ಇದರಿಂದಾಗಿ ಸಾಮಾನ್ಯ ಜನರು ನಿರಂತರ ನೋವು ಅನುಭವಿಸುತ್ತಿದ್ದು, ನಾವು ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಖಾದ್ಯ ತೈಲಗಳು, ಈರುಳ್ಳಿ, ಆಲೂಗಡ್ಡೆ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ ಎಂದು ಮಮತಾ ಬ್ಯಾನರ್ಜಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

Click to comment

Leave a Reply

Your email address will not be published. Required fields are marked *