Connect with us

Latest

ಪ್ರವಾಸಿ ಕಾರ್ಮಿಕರಿಗೆ ತಲಾ 10 ಸಾವಿರ ನೀಡುವಂತೆ ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಒತ್ತಾಯ

Published

on

ಕೋಲ್ಕತ್ತಾ: ಕೊರೊನಾ ನಿಯಂತ್ರಣ ಹಾಗೂ ಪರಿಹಾರ ಕ್ರಮಗಳ ಕುರಿತಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ಸರ್ಕಾರ ನಡುವೆ ನಡೆಯುತ್ತಿರುವ ಬ್ಲೇಮ್ ಗೇಮ್ ಮುಂದುವರಿದಿದೆ. ಕೇಂದ್ರ ಸರ್ಕಾರ ಪ್ರತಿ ಪ್ರವಾಸಿ ಕಾರ್ಮಿಕರ ಬ್ಯಾಂಕ್ ಖಾತೆಗೆ 10 ಸಾವಿರ ರೂ.ಗಳನ್ನು ನೀಡುವಂತೆ ಬುಧವಾರ ಸಿಎಂ ಮಮತಾ ಬ್ಯಾನರ್ಜಿ ಒತ್ತಾಯ ಮಾಡಿದ್ದಾರೆ.

ಪ್ರಧಾನಿ ಮಂತ್ರಿಗಳ ಪರಿಹಾರ ನಿಧಿಯನ್ನು ಬಳಕೆ ಮಾಡಿಕೊಳ್ಳುವ ಉತ್ತಮ ಸಮಯ ಇದಾಗಿದೆ. ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಅಸಂಘಟಿತ ವಲಯ ಹಾಗೂ ಪ್ರವಾಸಿ ಕಾರ್ಮಿಕರಿಗೆ ತಲಾ 10 ಸಾವಿರ ರೂ. ನೀಡಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಅಂಫಾನ್ ಚಂಡಮಾರುತ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡಿದ್ದ ಕುಟುಂಬಗಳ ನೆರವಿಗೆ ಬಂದಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ, ನಿನ್ನೆಯಷ್ಟೇ ತಲಾ 20 ಸಾವಿರ ರೂ. ಗಳನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿತ್ತು. ಇದರ ಬೆನ್ನಲ್ಲೇ ಸದ್ಯ ಮಮತಾ ಅವರು ಕಾರ್ಮಿಕರ ನೆರವಿಗೆ ಕೇಂದ್ರ ಆಗಮಿಸಬೇಕು. ನಮ್ಮ ಸರ್ಕಾರ ಚಂಡಮಾರುತ ಹೊಡೆತಕ್ಕೆ ಸಿಲುಕಿ ಸಮಸ್ಯೆ ಎದುರಿಸಿದ್ದ 5 ಲಕ್ಷ ಜನರಿಗೆ ನೆರವು ನೀಡಿದ್ದೇವೆ. ಅಲ್ಲದೇ 23.3 ಲಕ್ಷ ಬೆಳೆ ನಷ್ಟ ಪರಿಹಾರವನ್ನು ಬಿಡುಗಡೆ ಮಾಡಿದ್ದೇವೆ ಎಂದು ವಿವರಿಸಿದ್ದಾರೆ.

ಇತ್ತ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ, ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಪ್ರವಾಸಿ ಕಾರ್ಮಿಕರನ್ನು ವಾಪಸ್ ಕರೆಯಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ತಮ್ಮ ಅವ್ಯವಸ್ಥೆಯನ್ನು ಮುಚ್ಚಿ ಹಾಕಿಕೊಳ್ಳಲು ಇಂತಹ ಹೇಳಿಕೆ ನೀಡಿ ಗಮನ ಬೇರೆಡೆ ಸೆಳೆಯುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರವಾಸಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಮಮತಾ ಅವರ ಸರ್ಕಾರ ಅವರಿಗೆ ಹೊಸ ಜೀವನವನ್ನು ಕಲ್ಪಿಸಿಕೊಡುವ ಕಾರ್ಯ ಮಾಡುವ ಬದಲು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ರಾಜ್ಯದ ಪ್ರವಾಸಿ ಕಾರ್ಮಿಕರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇತ್ತ ಪಶ್ಚಿಮ ಬಂಗಾಳದ ಸರ್ಕಾರ ಮಾಹಿತಿ ಅನ್ವಯ ಸುಮಾರು 5 ಲಕ್ಷ ಪ್ರವಾಸಿ ಕಾರ್ಮಿಕರು ವಾಪಸ್ ಆಗಿದ್ದಾರೆ.