Connect with us

Districts

ನಾವು ದೇಶ ಉಳಿಸಿದ್ದಕ್ಕೆ ಮೋದಿ ಪ್ರಧಾನಿಯಾಗಿದ್ದಾರೆ – ಮಲ್ಲಿಕಾರ್ಜುನ ಖರ್ಗೆ

Published

on

– ಸೋತವರ ಸಂಘ ಕಟ್ಟಿಕೊಂಡ ನನ್ನ ಸೋಲಿಸಲು ಒಂದಾಗಿದ್ದಾರೆ
– ಮಾಲೀಕಯ್ಯ ಗುತ್ತೇದಾರ, ಚಿಂಚನಸೂರ ವಿರುದ್ಧ ವಾಗ್ದಾಳಿ
– ನಾನು ತಪ್ಪು ಮಾಡಿದ್ರೆ ಜೈಲಿಗಲ್ಲ, ನೇಣಿಗೆ ಬೇಕಾದ್ರು ಏರಿಸಲಿ

ಕಲಬುರಗಿ: ದೇಶದಲ್ಲಿ ಎಲ್ಲವನ್ನೂ ನಾನೇ ಮಾಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ನಾವು ದೇಶವನ್ನು ಉಳಿಸಿದ್ದಕ್ಕೆ ಮೋದಿ ಪ್ರಧಾನಿಯಾಗಿದ್ದಾರೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರಿಗಿಂತ 8 ವರ್ಷ ನಾನು ದೊಡ್ಡವನು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅವರಿನ್ನೂ ಹುಟ್ಟಿರಲಿಲ್ಲ. ಸ್ವಾತಂತ್ರ್ಯ ಸಮರದಲ್ಲಿ ಕಾಂಗ್ರೆಸ್ಸಿಗರು ಸರಣಿ ಸರಣಿಯಾಗಿ ಸಾವನ್ನಪ್ಪಿದ್ದಾರೆ. ದೇಶಕ್ಕಾಗಿ ಬಿಜೆಪಿಯವರು ಪ್ರಾಣ ತ್ಯಾಗ ಮಾಡಿದ್ದರೆ ಲಿಸ್ಟ್ ಕೊಡಿ ಎಂದು ಹೇಳಿದರು.

ಸೋತವರ ಸಂಘ ಕಟ್ಟಿಕೊಂಡು ನನ್ನನ್ನು ಸೋಲಿಸಲು ಒಂದಾಗಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು, ಪರೋಕ್ಷವಾಗಿ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ಹಾಗೂ ಬಾಬುರಾವ್ ಚಿಂಚನಸೂರ್ ವಿರುದ್ಧ ವಾಗ್ದಾಳಿ ನಡೆಸಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರವರೆಗೂ ಎಲ್ಲ ನಾಯಕರು ನನ್ನನ್ನು ಸೋಲಿಸಲು ಬಂದಿದ್ದಾರೆ. ನಾನೇನು ನಿಮ್ಮಪ್ಪನ ಗಂಟು ನಾವು ತಿಂದಿದ್ದೇನಾ? ಪ್ರಧಾನಿ ಮೋದಿ ಅವರು ಐದು ವರ್ಷಗಳ ಲೆಕ್ಕ ಕೊಡಬೇಕಿದೆ. 2014ರ ಲೋಕಸಭಾ ಚುನಾಣೆಯಲ್ಲಿ ಜನರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿದ್ದರು. ಆದರೆ 15 ಪೈಸೆ ಸಹ ಕೊಡಲಿಲ್ಲ ಎಂದರು.

ನಮ್ಮ ದೇಶದ ಜನರ ಹಣವನ್ನು ಲೂಟಿ ಹೊಡೆದವರು ಲಂಡನಲ್ಲಿದ್ದಾರೆ. ಚೌಕಿದಾರ್ ನರೇಂದ್ರ ಮೋದಿ ಅವರು ಮಾತ್ರ ಇಲ್ಲೇ ಸುಮ್ಮನೆ ಕುಳಿತಿದ್ದಾರೆ. ಚೌಕಿದಾರ್ ಇರೋದು ಕಳ್ಳತನ ತಡೆಯುದಕ್ಕೆ. ಆದರೆ ಪ್ರಧಾನಿ ಏನು ಮಾಡಿದರು? ಕಾಂಗ್ರೆಸ್ ಸರ್ಕಾರದ 10 ವರ್ಷಗಳ ಅವಧಿಯಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದೆ. ವಿದೇಶಗಳ ಮೇಲೆ ಯುದ್ಧ ಮಾಡಿದ್ದೇವೆ. ಆ ವಿಚಾರವನ್ನು ಬಳಸಿಕೊಂಡು ಮತ ಕೇಳಲಿಲ್ಲ ಎಂದು ಬಿಜೆಪಿ ವಿರುದ್ಧ ಗುಡುಗಿದರು.

ಈ ಚುನಾವಣೆ ದೇಶದ ದೃಷ್ಟಿಯಿಂದ ನಿಮ್ಮ ಭವಿಷ್ಯದ ದೃಷ್ಟಿಯಿಂದ ಪ್ರಮುಖವಾಗಿದೆ. ಕಳೆದ ಬಾರಿ ಮಂತ್ರಿಯಾಗಿದ್ದಾಗ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹೈದರಾಬಾದ್ ಕರ್ನಾಟಕ ಭಾಗದ ಅನೇಕ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದೇವೆ. 371(ಜೆ) ಜಾರಿಗೆ ತರಲು ನಮಗೆ ಪೂರ್ಣ ಬಹುಮತವಿರಲಿಲ್ಲ. ಹೀಗಾಗಿ 400 ಜನ ಸಂಸದರ ಮನವೊಲಿಸಿದ್ದೇವು. ಈ ಮೂಲಕ ರಾಜ್ಯದ 6 ಜಿಲ್ಲೆಯ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಇದಕ್ಕಾಗಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರದ್ದು ಅಪಾರ ಕೊಡುಗೆ ನೀಡಿದ್ದಾರೆ. ಅದರೆ ಬಿಜೆಪಿ ಇದನ್ನು ವಿರೋಧಿಸಿ ಮನವಿಯನ್ನು ಕಸದ ಬುಟ್ಟಿಯಲ್ಲಿ ಹಾಕಿದರು ಎಂದು ಕಿಡಿಕಾರಿದರು.

ಮಾಲೀಕಯ್ಯ ಗುತ್ತೇದಾರ್ ಅವರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ ಖರ್ಗೆ ಅವರು, ನಾನು 50 ಸಾವಿರ ಕೋಟಿ ರೂ. ವಂಚನೆ ಮಾಡಿಲ್ಲ. ಕೇಂದ್ರದಲ್ಲಿ ಸದ್ಯ ಅವರದ್ದೇ ಸರ್ಕಾರವಿದೆ. ಯಾವ ತನಿಖೆ ಬೇಕಾದರೂ ಮಾಡಿಸಲಿ ನಾನು ಸಿದ್ಧನಿದ್ದೇನೆ. ತನಿಖೆಯ ವೇಳೆ ನನ್ನ ಬಳಿ ಇರುವ ಆಸ್ತಿ ಎಷ್ಟು ಅಂತ ತಿಳಿಯುತ್ತದೆ. ನಾನು ತಪ್ಪು ಮಾಡಿದ್ದರೆ ಜೈಲಿಗಲ್ಲ, ನೇಣಿಗೆ ಬೇಕಾದರೂ ಏರಿಸಲಿ ಎಂದು ತಿರುಗೇಟು ನೀಡಿದರು.