Thursday, 12th December 2019

ಕಾಂಗ್ರೆಸ್ ದೇಶಕ್ಕೆ ಏನು ಮಾಡದೇ ಹೋಗಿದ್ರೆ ಇಷ್ಟು ಪ್ರಗತಿ ಆಗ್ತಿತ್ತಾ: ಪ್ರಧಾನಿ ಮೋದಿಗೆ ಖರ್ಗೆ ಪ್ರಶ್ನೆ

ಬಳ್ಳಾರಿ: ಕಾಂಗ್ರೆಸ್ ಜಾತ್ಯಾತೀತ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿದೆ. 70 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಧಾನಿಗಳು ಪ್ರಶ್ನೆ ಮಾಡಿದ್ದಾರೆ. ಆದರೆ ನಾವು ಏನು ಮಾಡದೆ ಹೋಗಿದ್ದರೆ ಇಷ್ಟು ಪ್ರಗತಿ ಆಗುತ್ತಿತ್ತಾ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಹೊಸಪೇಟೆಯಲ್ಲಿ ಏರ್ಪಡಿಲಾಗಿದ್ದ ಜನಾರ್ಶೀವಾದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಜಾಪ್ರಭುತ್ವ ಉಳಿಸುವ ಕೆಲಸ ಮಾಡಿದೆ. ನಾವು ಪ್ರಜಾಪ್ರಭುತ್ವ ಉಳಿಸಿದ್ದರಿಂದಲೇ ನೀವು ಪ್ರಧಾನಿಯಾಗಿದ್ದು ಎಂದು ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಕಾರ್ಯಕರ್ತರು ವಿರೋಧಿಗಳ ಸವಾಲಿಗೆ ಸವಾಲಿಗೆ ಸವಾಲು ಹಾಕಬೇಕು. ಅವರ ಜವಾಬ್ ಗೆ ಜವಾಬ್ ಕೊಡಬೇಕು ಎಂದು ಪ್ರಧಾನಿ ಮೋದಿ ಹಾಗೂ ಬಿಜೆಪಿ ಹೆಸರು ಪ್ರಸ್ತಾಪಿಸದೇ ತಿರುಗೇಟು ನೀಡಿದರು.

ರಾಜ್ಯದಲ್ಲಿ ಮತ್ತೊಮ್ಮೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಹೋರಾಟ ಮಾಡುತ್ತಿದ್ದಾರೆ. ಬಿಜೆಪಿಯವರು ಮನೆಮನೆಗೆ ಹೋಗುತ್ತಿದ್ದಾರೆ. ನಾವು ಕೂಡ ಮನೆಮನೆಗೆ ಹೋಗ್ತಿದ್ದೇವೆ. ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ರಾಜ್ಯದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅಷ್ಟೇ ಅಲ್ಲದೇ ಅವರ ಕಾರ್ಯಕರ್ತರನ್ನ ಹುರಿದುಂಬಿಸುತ್ತಾರೆ. ಆದರೆ ರಾಜ್ಯದ ಜನ ಅವರನ್ನು ಒಪ್ಪುವುದಿಲ್ಲ ಎಂದರು.

ರಾಜ್ಯದ ಜನ ನೆಹರು, ಇಂದಿರಾ ತತ್ವದ ಮೇಲೆ ನಿಂತಿದ್ದಾರೆ. ಪ್ರಜಾಪ್ರಭುತ್ವ ಉಳಿಸಿದ್ದು ಕಾಂಗ್ರೆಸ್. ಒಬ್ಬ ಚಾಯ್ ವಾಲಾ ಪ್ರಧಾನಿಯಾಗಲು ಸಂವಿಧಾನ ಕಾರಣ. ಆದರೆ ಆರ್‍ಎಸ್‍ಎಸ್ ಅಂಬೇಡ್ಕರ್ ಭಾವಚಿತ್ರ ಹಾಕಿಲ್ಲ. ಕಾಂಗ್ರೆಸ್ ಮುಖಂಡರಲ್ಲೇ ಭಿನ್ನಾಭಿಪ್ರಾಯ ಮೂಡಿಸುತ್ತಿದ್ದಾರೆ. ಅಂಬೇಡ್ಕರ್ ರನ್ನು ವೋಟಿಗಾಗಿ ಬಿಜೆಪಿ ನೆನೆಪಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನಸ್ತೋಮ ಬಂದಿದೆ. ಜನಸ್ತೋಮದ ನೋಡಿದರೆ ಮುಂದಿನ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನಮ್ಮ ಗೆಲುವು ಖಚಿತ. ಬಿಜೆಪಿಯವರು ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ. ನಮ್ಮವರೂ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ ತಲುಪಿಸುತ್ತಿದ್ದಾರೆ. ಬಿಜೆಪಿಯವರು ಕರ್ನಾಟಕ ಮುಕ್ತ ಕಾಂಗ್ರೆಸ್ ಮಾಡುತ್ತೇವೆ ಎನ್ನುತ್ತಾರೆ ಆದರೆ ಬಿಜೆಪಿಯವರ ತತ್ವ, ನೀತಿಗಳನ್ನು ರಾಜ್ಯದ ಜನತೆ ಒಪ್ಪಲ್ಲ ಎಂದರು.

 

Leave a Reply

Your email address will not be published. Required fields are marked *