Monday, 24th June 2019

Recent News

ಹೆರಿಗೆ ವೇಳೆ ನರ್ಸ್ ನಿರ್ಲಕ್ಷ್ಯದಿಂದ ಮಗು 2 ಭಾಗ – ಹೊಟ್ಟೆಯಲ್ಲಿ ತಲೆ, ಉಳಿದಿದ್ದು ಹೊರಗೆ

ಜೈಪುರ: ಹೆರಿಗೆ ಮಾಡಿಸುತ್ತಿದ್ದ ಸಮಯದಲ್ಲಿ ಮಗುವನ್ನು ಹೊರತೆಗೆಯುವಾಗ ನರ್ಸ್ ನಿರ್ಲಕ್ಷ್ಯದಿಂದಾಗಿ ಈಗ ತಾಯಿ ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ರಾಜಸ್ಥಾನದ ರಾಮಗಢ ಜಿಲ್ಲೆಯಲ್ಲಿ ನಡೆದಿದೆ.

ಸರ್ಕಾರಿ ವೈದ್ಯಕೀಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಪುರುಷ ನರ್ಸ್ ಎಡವಟ್ಟು ಮಾಡಿದ ಪರಿಣಾಮ ಮಗುವಿನ ಅರ್ಧ ಭಾಗ ಹೊಟ್ಟೆಯಲ್ಲಿದ್ದರೆ, ಉಳಿದ ಅರ್ಧ ಭಾಗ ಹೊರ ಬಂದಿದೆ.

ನಡೆದಿದ್ದು ಏನು?
ಗರ್ಭಿಣಿಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ತಾಯಿಯ ಗರ್ಭದಿಂದ ಹಸುಗೂಸನ್ನು ಹೊರತೆಗೆಯುವಾಗ ಪುರುಷ ನರ್ಸ್ ಮಗುವನ್ನು ಜೋರಾಗಿ ಎಳೆದಿದ್ದಾನೆ. ಪರಿಣಾಮ ಮಗು ಎರಡು ತುಂಡಾಗಿದೆ. ಆದರೆ ಮಗುವಿನ ಕಾಲು ಮಾತ್ರ ಹೊರಬಂದಿದ್ದು, ತಲೆ ಹೊಟ್ಟೆಯಲ್ಲಿ ಉಳಿದುಕೊಂಡಿದೆ.

ಇದಾದ ನಂತರ ನರ್ಸ್, ಆತನ ಸಹೋದ್ಯೋಗಿಗಳು ಸೇರಿಕೊಂಡು ಮಗುವಿನ ಅರ್ಧ ಭಾಗವನ್ನು ಆಸ್ಪತ್ರೆಯ ಶವಾಗಾರದಲ್ಲಿಟ್ಟು, ಈ ವಿಚಾರವನ್ನು ಮುಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಹೆಚ್ಚಿನ ಚಿಕಿತ್ಸೆಗಾಗಿ ತಾಯಿಯನ್ನು ಜೈಸಲ್ಮೇರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕುಟುಂಬದವರಿಗೆ ತಿಳಿಸಿದ್ದಾರೆ.

ಡಾ.ರವೀಂದ್ರ ಸಂಖ್ಲಾ ನೇತೃತ್ವದ ತಂಡ ಮಹಿಳೆಯನ್ನು ಪರಿಶೀಲನೆ ಮಾಡಿದ್ದಾರೆ. ಆಗ ಹೊಟ್ಟೆಯಲ್ಲಿ ಮಗುವಿನ ತಲೆ ಭಾಗವಿರುವುದು ಪತ್ತೆಯಾಗಿದೆ. ತಕ್ಷಣ ಈ ಬಗ್ಗೆ ವೈದ್ಯರು ಗರ್ಭಿಣಿಯ ಕುಟುಂಬದವರಿಗೆ ತಿಳಿಸಿದ್ದಾರೆ. ಇದಲ್ಲದೇ ಗರ್ಭಿಣಿ ಹೊಟ್ಟೆಯಲ್ಲಿ ಪ್ಲೆಸೆಂಟಾ(ಜರಾಯು ಅಥವಾ ಹೆರಿಗೆ ಕಸ)ವನ್ನು ಕೂಡ ಬಿಟ್ಟಿದ್ದಾರೆ. ನಂತರ ಡಾ.ರವೀಂದ್ರ ತಂಡ ಮಹಿಳೆಗೆ ಚಿಕಿತ್ಸೆ ನೀಡಿ ಮಗುವಿನ ತಲೆಯನ್ನು ಹೊರ ತೆಗೆದಿದ್ದಾರೆ. ಸದ್ಯಕ್ಕೆ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಈ ಬಗ್ಗೆ ಮಾಹಿತಿ ತಿಳಿದ ಮಹಿಳೆಯ ಪತಿ ತಕ್ಷಣ ರಾಮಗಢ ಆಸ್ಪತ್ರೆಗೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ಇದುವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *