Connect with us

Corona

ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟ- ಒಂದೇ ದಿನ 2,940 ಪ್ರಕರಣ ಪತ್ತೆ

Published

on

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸ್ಫೋಟ ಸಂಭವಿಸುತ್ತಿದ್ದು, ಶುಕ್ರವಾರ ಹೆಚ್ಚು ಕಡಿಮೆ ಮೂರು ಸಾವಿರ ಪ್ರಕರಣಗಳು ಪತ್ತೆಯಾಗುವ ಮೂಲಕ ಒಂದೇ ದಿನ ಹೆಚ್ಚು ಪ್ರಕರಣ ಪತ್ತೆಯಾದ ಹಿಂದಿನ ದಾಖಲೆಗಳನ್ನು ಮುರಿದಿದೆ. ಶುಕ್ರವಾರ 2,940 ಪ್ರಕರಣಗಳು ಕಂಡುಬಂದಿವೆ.

ಒಂದೇ ದಿನ ಹೆಚ್ಚು ಕಡಿಮೆ 3 ಸಾವಿರ ಪ್ರಕರಣಗಳು ಪತ್ತೆಯಾಗಿದ್ದರಿಂದ ಮಹಾರಾಷ್ಟ್ರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ 2,940 ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು 44,582 ಪ್ರಕರಣಗಳು ದಾಖಲಾದಂತಾಗಿದೆ. ಅಲ್ಲದೆ ಒಂದೇ ದಿನ 63 ಜನ ಸಾವನ್ನಪ್ಪಿದ್ದು, ಈ ವರಗೆ ಮಹಾರಾಷ್ಟ್ರದಲ್ಲಿ ಒಟ್ಟು 1,517 ಜನ ಸಾವನ್ನಪ್ಪಿದ್ದಾರೆ ಎಂಬ ಅಂಕಿ ಅಂಶ ಹೊರ ಬಿದ್ದಿದೆ.

ಒಟ್ಟು ಪ್ರಕರಣಗಳಲ್ಲಿ ಕನಿಷ್ಟ 27,251 ಪ್ರಕರಣಗಳು ಮುಂಬೈ ಒಂದರಲ್ಲೇ ಪತ್ತೆಯಾಗಿವೆ. ಅಲ್ಲದೆ 909 ಜನ ಸಾವನ್ನಪ್ಪಿದ್ದಾರೆ. ಇದೆಲ್ಲದರ ಮಧ್ಯೆ ಮುಂಬೈ ಪ್ರಾಧಿಕಾರ ಇಂದು ಮದ್ಯವನ್ನು ಹೋಮ್ ಡೆಲಿವರಿ ಮಾಡುವ ನಿರ್ಧಾರ ಕೈಗೊಂಡಿದ್ದು, ಕಂಟೋನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಲ್ಲ ಕಡೆ ಮದ್ಯ ಹೋಮ್ ಡೆಲಿವರಿ ಮಾಡಲು ಮುಂದಾಗಿದೆ.

ಕಳೆದ ಆರು ದಿನಗಳಿಂದ ಮಹಾರಾಷ್ಟ್ರದಲ್ಲಿ ಪ್ರತಿ ದಿನ 2 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ವೆರೆಗೆ 3.33 ಲಕ್ಷ ಜನರನ್ನು ಕೊರೊನಾ ಪರೀಕ್ಷೆ ಒಳಪಡಿಸಲಾಗಿದೆ ಎಂದು ಮಹಾರಾಷ್ಟ್ರದ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.