Wednesday, 26th February 2020

Recent News

ಮೈಸೂರು ಮೇಯರ್ ಪಟ್ಟಕೇರಲಿದ್ದಾರೆ ಪ್ರಪ್ರಥಮ ಮುಸ್ಲಿಂ ಮಹಿಳೆ

– ತಸ್ಲಿಂ ಮೇಯರ್, ಉಪ ಮೇಯರ್ ಶ್ರೀಧರ್

ಮೈಸೂರು: ಶನಿವಾರ ಮೈಸೂರು ಮಹಾ ನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಮೇಯರ್ ಆಗಿ ಜೆಡಿಎಸ್‍ನ ತಸ್ಲಿಂ, ಉಪ ಮೇಯರ್ ಆಗಿ ಕಾಂಗ್ರೆಸ್ ನ ಶ್ರೀಧರ್ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ.

ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನದ ಎರಡನೇ ಅವಧಿಯ ಚುನಾವಣೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಯುತ್ತಿದೆ. ಎರಡು ಪಕ್ಷಗಳ ಮೂಲಗಳ ಪ್ರಕಾರ, ಮೇಯರ್ ಸ್ಥಾನ ತಸ್ಲೀಂಗೆ ಹಾಗೂ ಉಪ ಮೇಯರ್ ಸ್ಥಾನ ಶ್ರೀಧರ್‍ಗೆ ಸಿಗುವುದು ಖಚಿತ ಎನ್ನಲಾಗುತ್ತಿದೆ. ಹಿಂದುಳಿದ ‘ಎ’ ವರ್ಗದ ಮಹಿಳೆಗೆ ಮೇಯರ್ ಸ್ಥಾನ ಮೀಸಲಾಗಿದ್ದು ಜೆಡಿಎಸ್‍ನಲ್ಲಿ ನಾಲ್ವರು ಆಕಾಂಕ್ಷಿಗಳಿದ್ದಾರೆ. ನಮ್ರತಾ ರಮೇಶ್, ತಸ್ಲಿಂ, ನಿರ್ಮಲಾ ಹರೀಶ್, ರೇಶ್ಮಾಭಾನು ರೇಸ್‍ನಲ್ಲಿ ಇದ್ದಾರೆ.

ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಕಾಂಗ್ರೆಸ್ಸಿನಲ್ಲಿ ನಾಲ್ವರು ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿದೆ. ಪ್ರದೀಪ್ ಚಂದ್ರ, ಆರ್ ಶ್ರೀಧರ್, ಸತ್ಯರಾಜು ಹಾಗೂ ಭುವನೇಶ್ವರಿ ಪ್ರಭುಮೂರ್ತಿ ಉಪಮೇಯರ್ ರೇಸ್‍ನಲ್ಲಿದ್ದಾರೆ.

ಪಾಲಿಕೆಯಲ್ಲಿ 73 ಸದಸ್ಯರು ಮೇಯರ್ ಸ್ಥಾನಕ್ಕೆ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಜೆಡಿಎಸ್ 18 +ಬಿಎಸ್‍ಪಿ 1, ಕಾಂಗ್ರೆಸ್ 19, ಬಿಜೆಪಿ 21, ಪಕ್ಷೇತರರು 5, ಶಾಸಕರು 4(ಜಿಟಿ ದೇವೇಗೌಡ, ತನ್ವೀರ್ ಸೇಠ್, ಎಲ್ ನಾಗೇಂದ್ರ, ಎಸ್ ಎ ರಾಮದಾಸ್), ವಿಧಾನ ಪರಿಷತ್ ಸದಸ್ಯರು 4 (ಮರಿತಿಬ್ಬೇಗೌಡ, ಸಂದೇಶ್ ನಾಗರಾಜ್ ,ಕೆಟಿ ಶ್ರೀಕಂಠೆಗೌಡ, ಹಾಗೂ ಆರ್ ಧರ್ಮಸೇನಾ), ಸಂಸದ 1(ಪ್ರತಾಪ್ ಸಿಂಹ) ಸೇರಿ ಒಟ್ಟು 73 ಸದಸ್ಯರಿದ್ದು, ಬಹುಮತ ಸಾಬೀತು ಪಡಿಸಲು 37 ಸದಸ್ಯರ ಬೆಂಬಲ ಬೇಕಾಗಿದೆ.

18 ನೇ ವಾರ್ಡಿನ ಬಿಜೆಪಿ ಸದಸ್ಯ ಗುರುವಿನಯ ಸ್ಥಾನ ರದ್ದಾದ ಕಾರಣ ಪಾಲಿಕೆಯಲ್ಲಿ ಬಿಜೆಪಿ ಬಲ 22 ರಿಂದ 21 ಕ್ಕೆ ಕುಸಿದಿದೆ. ಪಾಲಿಕೆಯ 65 ಸ್ಥಾನಗಳ ಪೈಕಿ 64 ಸದಸ್ಯರು ಮಾತ್ರ ಮತ ಚಲಾಯಿಸಲಿದ್ದಾರೆ.

Leave a Reply

Your email address will not be published. Required fields are marked *