Connect with us

Dharwad

ಮಹಾದಾಯಿ ಇತ್ಯರ್ಥವಾಗ್ಬೇಕಾದ್ರೆ ಗೋವಾ ಕಾಂಗ್ರೆಸ್ ಸುಮ್ಮನಿರಬೇಕು – ಶೆಟ್ಟರ್

Published

on

ಧಾರವಾಡ: ಮಹದಾಯಿ ಇತ್ಯರ್ಥ ಆಗಬೇಕಾದಲ್ಲಿ ಗೋವಾ ಕಾಂಗ್ರೆಸ್ ಸುಮ್ಮನೆ ಕುಳಿತುಕೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ಕಾಂಗ್ರೆಸ್ ಸುಮ್ಮನೆ ಕುಳಿತರೆ ಐದೇ ನಿಮಿಷದಲ್ಲಿ ಮಹದಾಯಿ ಸಮಸ್ಯೆ ಬಗೆ ಹರಿಯುತ್ತದೆ. ಅಲ್ಲಿನ ನಮ್ಮ ಸಿಎಂ ಮಾತುಕತೆಗೆ ಒಪ್ಪಿದ್ದಾರೆ. ಆದರೆ ಕಾಂಗ್ರೆಸ್ ಧರಣಿ ಮಾಡುತ್ತಿದೆ ಇದು ನಿಲ್ಲಬೇಕು. ಮಹದಾಯಿಯಲ್ಲಿ ಸರ್ಕಾರದ ಪ್ರಶ್ನೆ ಬರುವುದಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಪ್ರಶ್ನೆ ಬರುತ್ತದೆ. ಗೋವಾ ಕಾಂಗ್ರೆಸಿನ ನಿಲುವೇನು ಎಂದು ತಿಳಿಸಬೇಕು. ಬಿಜೆಪಿಯದ್ದು ಒಂದೇ ನಿಲುವಿದೆ. ಆದರೆ ಕಾಂಗ್ರೆಸ್ ವಿರೋಧ ಮಾಡಿಕೊಂಡೇ ಬಂದಿದೆ ಎಂದರು.

ಗೋವಾ ಮುಖ್ಯಮಂತ್ರಿಗಳು ಮಾತುಕತೆಗೆ ರೆಡಿ ಇದ್ದಾರೆ. ಇವತ್ತಿಲ್ಲ ನಾಳೆ ಕೆಲವೇ ದಿನಗಳಲ್ಲಿ ಮಹದಾಯಿ ನೋಟಿಫಿಕೇಷನ್ ಆಗಿಯೇ ಆಗುತ್ತದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಹತ್ತು ವರ್ಷ ಯುಪಿಎ ಸರ್ಕಾರ ಇದ್ದಾಗ ಇವರೆಲ್ಲ ಮಲಗಿದ್ದರಾ? ತುಮಕೂರು ಶ್ರೀಗಳಿಗೆ ಭಾರತರತ್ನ ನೀಡುವುದು ಯುಪಿಎ ಸರ್ಕಾರ ಇದ್ದಾಗ ಏಕೆ ನೆನಪಾಗಲಿಲ್ಲ. ಶ್ರೀಗಳಿಗೆ ಭಾರತ ರತ್ನ ಕೊಡುವ ಕುರಿತು ನಮ್ಮ ಒತ್ತಾಯ ಇದೆ. ಆದರೆ ಅದು ಯಾವುದೋ ಕಾರಣಕ್ಕೆ ಆಗಿಲ್ಲ. ಅವರಿಗೆ ಭಾರತ ರತ್ನ ಸಿಗಲೇಬೇಕಿತ್ತು. ಇಂದೂ ಸಹ ಈ ಕುರಿತು ನಾವು ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರಿಗೆ ತಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ಅವರು ಕಾಂಗ್ರೆಸ್‍ಗೆ ಇತ್ತೀಚೆಗೆ ಬಂದವರು. ತುರ್ತು ಪರಿಸ್ಥಿತಿ ಸಮಯದಲ್ಲಿ ಇದೇ ಸಿದ್ದರಾಮಯ್ಯ ಇಂದಿರಾ ಗಾಂಧಿ ಅವರನ್ನು ಸರ್ವಾಧಿಕಾರಿ ಎಂದು ಕರೆದಿದ್ದರು. ಈಗ ಅದೇ ಕಾಂಗ್ರೆಸ್‍ನಲ್ಲಿ ಇದ್ದರಲ್ಲ. ದೇಶಕ್ಕೆ ರಾಜೀವ್ ಗಾಂಧಿ ಕೊಡುಗೆ ಏನಿದೆ? ಭೋಫೋರ್ಸ್ ಹಗರಣವೇ ರಾಜೀವ್ ಗಾಂಧಿ ಕೊಡುಗೆ ಇರಬೇಕು ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿಯವರು ಉತ್ತಮ ಆಡಳಿತ ಕೊಟ್ಟಿದ್ದಾರೆ. ದೇಶ ಆಧೋಗತಿಗೆ ಹೋಗಲು ಕಾಂಗ್ರೆಸ್ 60 ವರ್ಷ ಲೂಟಿ ಮಾಡಿದ್ದೇ ಕಾರಣ. ಸಿದ್ದರಾಮಯ್ಯ ಕಾಂಗ್ರೆಸ್ ವಿರುದ್ಧ ಮಾತನಾಡಿದ ದಾಖಲೆಗಳನ್ನು ಸ್ವಲ್ಪ ನೋಡಲಿ. ತಮ್ಮ ಹಿಂದಿನ ಹೇಳಿಕೆ ಅವಲೋಕನ ಮಾಡಿದರೆ ಯಾರು ಸರ್ವಾಧಿಕಾರಿ ಎಂದು ಗೊತ್ತಾಗುತ್ತದೆ. ಆರ್ಥಿಕವಾಗಿ ಬಹಳ ತೊಂದರೆಯಲ್ಲಿರುವ ರಾಷ್ಟ್ರ ನಮ್ಮದು. ಯುಪಿಎ ಸರ್ಕಾರ ಹಿಂದೆ ಎಷ್ಟು ಸಾಲ ಮಾಡಿತ್ತು ಗೊತ್ತಾ? ಚಿನ್ನ ಒತ್ತೆ ಇಟ್ಟು ಇವರ ಸಾಲ ತೀರಿಸುವ ಸ್ಥಿತಿ ಬಂದಿತ್ತು. ಕಾಂಗ್ರೆಸ್‍ನವರಿದ್ದಾಗ ಅಷ್ಟೊಂದು ಅಧೋಗತಿಗೆ ಹೋಗಿತ್ತು. ಇಡೀ ವಿಶ್ವಾದ್ಯಂತ ಆರ್ಥಿಕ ಹಿಂಜರಿತ ಇದೆ ಅದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ ಎಂದರು.