Connect with us

ಏಪ್ರಿಲ್ 20ರ ವರೆಗೆ ಕೊಡಗಿನ ಪ್ರವಾಸಿತಾಣಗಳು ಬಂದ್

ಏಪ್ರಿಲ್ 20ರ ವರೆಗೆ ಕೊಡಗಿನ ಪ್ರವಾಸಿತಾಣಗಳು ಬಂದ್

ಮಡಿಕೇರಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 20ರ ವರೆಗೆ ಕೊಡಗಿನ ಎಲ್ಲಾ ಪ್ರವಾಸಿತಾಣಗಳನ್ನು ಬಂದ್ ಮಾಡಲು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.

ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು ವೀಕೆಂಡ್ ಬಂತೆಂದರೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಜನ ಕೋವಿಡ್ ನಿಯಮಗಳನ್ನು ಸಂಪೂರ್ಣ ಮರೆತುಬಿಟ್ಟಿದ್ದಾರೆ. ಅದರಲ್ಲೂ ಕೊಡಗಿನ ಪ್ರವಾಸಿತಾಣಗಳಾದ ದುಬಾರೆ, ನಿಸರ್ಗಧಾಮ, ಮಡಿಕೇರಿ ನಗರದ ರಾಜಾಸೀಟ್, ಅಬ್ಬಿ ಜಲಪಾತ, ಮಂದಲ್ ಪಟ್ಟಿ ಸೇರಿದಂತೆ ಅನೇಕ ಪ್ರವಾಸಿತಾಣಗಳಲ್ಲಿ ಕೊರೊನಾ ನಿಯಮಗಳನ್ನು ಮರೆತು ಎಂಜಾಯ್ ಮಾಡುತ್ತಿದ್ದಾರೆ. ಇದರ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸಾಕಷ್ಟು ಬಾರಿ ವರದಿ ಪ್ರಸಾರ ಮಾಡಲಾಗಿತ್ತು. ಇದರಿಂದ ಕಡೆಗೂ ಎಚ್ಚೆತ್ತ ಜಿಲ್ಲಾಡಳಿತ ಇದೀಗ ಪ್ರವಾಸಿತಾಣಗಳನ್ನು ಏಪ್ರಿಲ್ 20 ರ ವರೆಗೆ ಬಂದ್ ಮಾಡಲು ಆದೇಶ ನೀಡಿದೆ.

ಪಕ್ಕದ ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಗಡಿ ಭಾಗದಲ್ಲಿ ಸಾಕಷ್ಟು ಕಟ್ಟೆಚ್ಚರ ವಹಿಸಿದರೂ ಜಿಲ್ಲೆಗೆ ಬರುವ ಪ್ರವಾಸಿಗರಿಂದ ಕಂಟಕ ಎದುರಾಗುತ್ತಿದೆ. ಹೀಗಾಗಿ ಸೋಂಕಿನ ಪ್ರಕರಣಗಳನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಪ್ರವಾಸಿಗರು ಮತ್ತು ಸಾರ್ವಜನಿಕರ ವೀಕ್ಷಣೆಗೆ ಪ್ರವಾಸಿತಾಣಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ.

ಒಟ್ಟಿನಲ್ಲಿ ವರ್ಷದಲ್ಲಿ ಎರಡನೇ ಬಾರಿಗೆ ಮತ್ತೆ ಕೊಡಗಿನ ಪ್ರವಾಸಿತಾಣಗಳು ಬಂದ್ ಅಗುತ್ತಿರುವುದರಿಂದ ಪ್ರವಾಸಿತಾಣಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವವರ ಸ್ಥಿತಿ ಶೋಚನೀಯವಾಗುತ್ತಿದೆ.

Advertisement
Advertisement