Tuesday, 18th February 2020

1 ಸೂಟ್‍ಕೇಸ್, 3 ಹ್ಯಾಂಡ್ ಬ್ಯಾಗ್, 1 ಬಾಕ್ಸ್ – ಮಂದಣ್ಣ ಮನೆಯಿಂದ ದಾಖಲೆ ಹೊತ್ತೊಯ್ದ ಐಟಿ

– 9 ಗಂಟೆಗಳ ಕಾಲ ಕಿರಿಕ್ ಬ್ಯೂಟಿಗೆ ಐಟಿ ಡ್ರಿಲ್

ಮಡಿಕೇರಿ: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣಗೆ ಐಟಿ ಗುನ್ನಾ ನೀಡಿದ್ದು, ಸತತ 29 ಗಂಟೆಗಳ ಬಳಿಕ ಐಟಿ ಅಧಿಕಾರಿಗಳ ತಲಾಶ್ ಮುಕ್ತಾಯವಾಗಿದೆ. 1 ಸೂಟ್‍ಕೇಸ್, 3 ಹ್ಯಾಂಡ್ ಬ್ಯಾಗ್, 1 ಬಾಕ್ಸ್ ನಲ್ಲಿ ಮಂದಣ್ಣ ಮನೆಯಲ್ಲಿ ಸಿಕ್ಕ ದಾಖಲೆಯನ್ನು ಐಟಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ.

ಗುರುವಾರ ಮುಂಜಾನೆ 7:30ಕ್ಕೆ ರಶ್ಮಿಕಾ ಅಭಿಮಾನಿಗಳು ಎಂದು ಎಂಟ್ರಿ ಕೊಟ್ಟಿದ್ದ ಆಂಧ್ರಪ್ರದೇಶದ ಐಟಿ ಅಧಿಕಾರಿಗಳು ಮನೆಯನ್ನು ಜಾಲಾಡಿ ದಾಖಲೆಗಳನ್ನು ಕಲೆಹಾಕಿದ್ದಾರೆ. ರಶ್ಮಿಕಾ ಮಂದಣ್ಣ ತಂದೆ ಒಡೆತನದ ಬೃಹತ್ ಬಂಗಲೆ, ಸೆರೆನಿಟಿ ಕಲ್ಯಾಣ ಮಂಟಪ, ಕಾಫಿ ತೋಟ, ಹೊಸದಾಗಿ ಖರೀದಿ ಮಾಡಿ ಬಿಟ್ಟಂಗಾಲದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್, ಪೆಟ್ರೋಲ್ ಬಂಕ್ ಜಾಗದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಇದರ ಮಧ್ಯೆ ನಿನ್ನೆ ಮಧ್ಯಾಹ್ನ ಐಟಿ ಅಧಿಕಾರಿಗಳ ತಂಡ ರಶ್ಮಿಕಾ ಮಂದಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಹೈದರಾಬಾದ್ ನಲ್ಲಿ ಶೂಟಿಂಗ್‍ನಲ್ಲಿ ನಿರತರಾಗಿದ್ದ ನಟಿ ರಶ್ಮಿಕಾ ಮಂದಣ್ಣ ವಿಮಾನದಲ್ಲಿ ಮೈಸೂರಿಗೆ ಬಂದು ಬಳಿಕ ಕಾರಿನಲ್ಲಿ ಗುರುವಾರ ರಾತ್ರಿಯೇ ಮನೆಗೆ ಧಾವಿಸಿದ್ದರು. ಮನೆಗೆ ಬಂದ ರಶ್ಮಿಕಾ, ಮನೆಯಲ್ಲಿ ಐಟಿ ದಾಳಿಯಿಂದ ಶಾಕ್ ಆಗಿದ್ದ ತಂದೆ ಮದನ್ ಮಂದಣ್ಣ, ತಾಯಿ ಸುಮನ್ ನೋಡಿ ಆರಂಭದಲ್ಲಿ ವಿಚಲಿತರಾದರು. ಬಳಿಕ ಅಪ್ಪ ಅಮ್ಮನನ್ನು ಸಂತೈಸಿ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.

ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ನಟಿ ರಶ್ಮಿಕಾಗೆ ಐಟಿ ಅಧಿಕಾರಿಗಳು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾರೆ. ಎಲ್ಲದಕ್ಕೂ ಸಮಾಧಾನದಿಂದಲೇ ಉತ್ತರ ಕೊಟ್ಟಿದ್ದ ರಶ್ಮಿಕಾ ತನ್ನ ಬ್ಯಾಂಕ್ ಬ್ಯಾಲೆನ್ಸ್, ಅಕೌಂಟ್ ಇರುವ ಬ್ಯಾಂಕ್‍ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿವರೆಗೂ ನಡೆದ ವಿಚಾರಣೆಯಲ್ಲಿ ಕುಟುಂಬದ ಆಸ್ತಿ ಮೂಲ, ತಾನು ಸಿನಿಮಾ ಇಂಡಸ್ಟ್ರಿಯಲ್ಲಿ ಗಳಿಸಿದ ಹಣದ ಬಗ್ಗೆ ಐಟಿ ಅಧಿಕಾರಿಗಳ ಮುಂದೆ ಉತ್ತರ ನೀಡಿದ್ದಾರೆ. ನಂತರ ಮಹಿಳಾ ಅಧಿಕಾರಿಯನ್ನು ಮನೆಯಲ್ಲೇ ಬಿಟ್ಟು ರಶ್ಮಿಕಾ ಮಂದಣ್ಣ ಕುಟುಂಬದ ಒಡೆತನದ ಸೆರಿನಿಟಿ ರೆಸಾರ್ಟ್ ನಲ್ಲಿಯೇ ಐಟಿ ಅಧಿಕಾರಿಗಳು ವಾಸ್ತವ್ಯ ಹೂಡಿದ್ದರು.

ತಡರಾತ್ರಿವರೆಗೂ ರಶ್ಮಿಕಾ ಮಂದಣ್ಣನನ್ನು ವಿಚಾರಣೆ ಒಳಪಡಿಸಿದ್ದ ಐಟಿ ತಂಡ, ಮುಂಜಾನೆ ಬಿಟ್ಟು ಕಳುಹಿಸಿತ್ತು. ಮುಂಜಾನೆ ಮನೆಯಿಂದ ಹೊರಬಂದ ರಶ್ಮಿಕಾ ಮಂದಣ್ಣ ತಂದೆಗೆ ನಮಸ್ಕಾರ ಮಾಡಿ, ಮಾಧ್ಯಮಗಳ ಕ್ಯಾಮೆರಾಗೆ ಹಾಯ್ ಮಾಡಿ ತೆರಳಿದ್ದರು. ರಶ್ಮಿಕಾ ಮನೆಯಿಂದ ತೆರಳುತ್ತಿದ್ದಂತೆ ಇತ್ತ ಐಟಿ ಅಧಿಕಾರಿಗಳ ಎರಡು ತಂಡ ಮತ್ತೆ ಮನೆ ಪ್ರವೇಶ ಮಾಡಿತ್ತು.

ಎರಡನೇ ದಿನ ಐಟಿ ದಾಳಿ ಮುಂದುವರಿಸಿದ್ದ ಐಟಿ ತಂಡ ಸುಮಾರು 12.30 ರ ವೇಳೆಗೆ ದಾಖಲೆಗಳ ಪರಿಶೀಲನೆ ಮುಕ್ತಾಯ ಮಾಡಿತು. ಮನೆಯಿಂದ ಮಹತ್ವದ ದಾಖಲೆಗಳ ಪಡೆದ ಪತ್ರಕ್ಕೆ ರಶ್ಮಿಕಾ ಕುಟುಂಬದಿಂದ ಸಹಿ ಪಡೆದು ತೆರಳಿದರು. ಐಟಿ ತಂಡ ಹೋದ ಬಳಿಕ ಮನೆಯಿಂದ ತಾಯಿ ಜೊತೆ ಹೊರ ಬಂದ ರಶ್ಮಿಕಾ ಮಂದಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಐಟಿ ಅವರು ಅವರ ಕೆಲಸ ಮಾಡಿದ್ದಾರೆ. ಯಾವ ಕಾರಣಕ್ಕೆ ದಾಳಿ ಮಾಡಿದ್ದಾರೆ ನಮಗೆ ಗೊತ್ತಿಲ್ಲ. ನಾವು ಎಲ್ಲಾ ಮಾಹಿತಿಗಳನ್ನು ನೀಡಿದ್ದೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *