Connect with us

Districts

ಪ್ರವಾಸಿಗರನ್ನು ಸೆಳೆಯಲು ಬೆಟ್ಟವನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ- ಸ್ಥಳೀಯರಲ್ಲಿ ಆತಂಕ

Published

on

Share this

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಕೃತಿ ವಿಕೋಪ, ಭೂಕುಸಿತ. ಸಾವು-ನೋವುಗಳು ಸಂಭವಿಸುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಬೆಟ್ಟಗುಡ್ಡಗಳಲ್ಲಿ ಯಂತ್ರೋಪಕರಣಗಳನ್ನು ಬಳಕೆ ಮಾಡಬಾರದು ಬೆಟ್ಟಗುಡ್ಡಗಳಲ್ಲಿ ರೆಸಾರ್ಟ್, ಕಟ್ಟಡ ಕಾಮಗಾರಿ ಮಾಡಬಾರದು ಎಂದು ಸರ್ಕಾರಕ್ಕೆ ವರದಿ ನೀಡಿದೆ. ಹೀಗಿದ್ದರೂ ಪ್ರವಾಸಿಗರನ್ನು ಸೆಳೆಯಲು ತೋಟಗಾರಿಕೆ ಇಲಾಖೆ ಬೆಟ್ಟಗಳನ್ನು ಕೊರೆದು ವ್ಯೂವ್ ಪಾಯಿಂಟ್ ನಿರ್ಮಾಣ ಮಾಡಲು ಮುಂದಾಗಿದ್ದು, ಬೆಟ್ಟದ ಕೆಳಗೆ ವಾಸ ಮಾಡುವ ಜನರಿಗೆ ಇದೀಗ ಅತಂಕ ಶುರುವಾಗಿದೆ.

ಮಳೆಗಾಲ ಆರಂಭವಾಯಿತು ಅಂದ್ರೆ ಕೊಡಗಿನ ಜನರಿಗೆ ಅತಂಕ ಶುರುವಾಗುತ್ತದೆ. ಕಳೆದ ಮೂರು ವರ್ಷದಿಂದ ಅರಂಭವಾಗಿರುವ ಜಲಪ್ರಳಯ ಭೂಕುಸಿತ ಇಲ್ಲಿಯ ಜನರನ್ನು ಬೆಚ್ಚಿಬೀಳಿಸಿದೆ. ಕಳೆದ ವರ್ಷ ಕಾವೇರಿ ಉಗಮ ಸ್ಥಾನ ತಲಕಾವೇರಿಯ ಗಜಗಿರಿ ಬೆಟ್ಟ ಪ್ರದೇಶದಲ್ಲಿ ನಡೆದ ದುರಂತದಲ್ಲಿ ಅರ್ಚಕರಾದ ನಾರಾಯಣ್ ಅಚಾರ್ ಕುಟುಂಬವೇ ಭೂ ಸಮಾಧಿಯಾಗಿದ್ದನ್ನು ಯಾರೂ ಮರೆತ್ತಿಲ್ಲ. ಹೀಗಿದ್ದರೂ ಮಂಗಳೂರು ರಸ್ತೆಗೆ ಹೊಂದಿಕೊಂಡಿರುವ ರಾಜಸೀಟ್ ವ್ಯೂವ್ ಪಾಯಿಂಟ್ ಮಾಡಲು ಸುಮಾರು ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಬೆಟ್ಟ ಕೊರೆಯುವ ಕಾಮಗಾರಿಯನ್ನು ತೋಟಗಾರಿಕೆ ಇಲಾಖೆ ಅರಂಭ ಮಾಡಿದೆ. ಇದನ್ನೂ ಓದಿ: ಕೊಡಗಿನ ವಿವಿಧೆಡೆ ಮುಂದುವರಿದ ಮಳೆ- ಹೆಗ್ಗಳ ಗ್ರಾಮದಿಂದ ಕುಟುಂಬಗಳ ಸ್ಥಳಾಂತರ

ನಾಲ್ಕು ಹಂತವಾಗಿ ಬೆಟ್ಟವನ್ನೇ ಕತ್ತರಿಸಿ ತೆಗೆಯುವ ಕಾಮಗಾರಿ ನಡೆಸುತ್ತಿದ್ದು, ಇದರಿಂದಾಗಿ ಬೆಟ್ಟದ ಕೆಳಗೆ ವಾಸಮಾಡುತ್ತಿರುವ ಹತ್ತಾರು ಕುಟುಂಬ ಭಯದಲ್ಲಿ ದಿನ ಕಳೆಯುತ್ತಿದೆ. ಬೆಟ್ಟ ಕುಸಿದು ಬಿದ್ದರೆ ಅಪಾಯ ಅಗುವ ಸಾಧ್ಯತೆ ಹೆಚ್ಚಾಗಿದೆ. ಪ್ರವಾಸೋದ್ಯಮದ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ದಬ್ಬಾಳಿಕೆ ನಡೆಸಿ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ಪೋಲು ಮಾಡಲಾಗುತ್ತಿದ್ದು, ಮಡಿಕೇರಿ ನಗರದಲ್ಲಿ ಒಂದು ರಸ್ತೆ ಕೂಡ ನಡೆದಾಡಲು ಸಮರ್ಪಕವಾಗಿಲ್ಲ. ಆದರೆ ರಾಜಾಸೀಟ್ ಗುಡ್ಡದಲ್ಲಿ ಕಾಂಕ್ರಿಟ್ ರಸ್ತೆ, ಮೆಟ್ಟಿಲು, ವ್ಯೂವ್ ಪಾಯಿಂಟ್, ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳೆವಣಿಗೆಯಾಗಿದ್ದು, ಕಾಂಕ್ರಿಟ್ ಕಾಡಿನ ಮೂಲಕ ರಭಸವಾಗಿ ಹರಿಯುವ ನೀರು ಗುಡ್ಡ ಕುಸಿಯಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲಿದೆ. ಇದನ್ನೂ ಓದಿ: ಕೊಡಗಿನ 47 ಪ್ರವಾಹ, 38 ಭೂಕುಸಿತ ಸಂಭವನೀಯ ಪ್ರದೇಶಗಳನ್ನು ಗುರುತಿಸಿದ ಜಿಲ್ಲಾಡಳಿತ

ಬೆಟ್ಟ, ಗುಡ್ಡಗಳಲ್ಲಿ ಮರ, ಗಿಡ, ಹುಲ್ಲಿದ್ದರೆ ಮಳೆಯ ನೀರಿನಿಂದ ಅಪಾಯ ಸಂಭವಿಸುವುದಿಲ್ಲ. ಆದರೆ ಅಗೆದು ಸಮತೋಲನವನ್ನು ಹದಗೆಡಿಸಿದರೆ ಕುಸಿಯುವ ಭೀತಿ ಹೆಚ್ಚಾಗಿದೆ. ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ಪ್ರಕೃತಿ ವರವಾಗಿ ನೀಡಿರುವ ಪ್ರವಾಸಿತಾಣಗಳನ್ನು ಕುರೂಪಗೊಳಿಸುತ್ತಿರುವುದನ್ನು ಜಿಲ್ಲಾಡಳಿತ, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೋಡಿಯು ಮೌನಕ್ಕೆ ಶರಣಾಗಿದ್ದಾರೆ. ಈ ಕುರಿತು ಸ್ಥಳೀಯ ಸಾರ್ವಜನಿಕರು ಎಚ್ಚರಿಕೆ ನೀಡಿದ್ದು, ಕಾಮಗಾರಿ ವಿರುದ್ಧ ನ್ಯಾಯಾಲಯದ ಮೋರೆ ಹೋಗುವುದಾಗಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮೂರು ವರ್ಷದಿಂದ ಅಗುತ್ತಿರುವ ಅನಾಹುತಗಳ ಬಗ್ಗೆ ಜಿಲ್ಲಾಡಳಿತಕ್ಕೆ ಅರಿವು ಇದ್ದರೂ ಕೂಡ ಮತ್ತೆ ಬೆಟ್ಟ ಕೊರೆದು ಕಾಮಗಾರಿ ಮಾಡುತ್ತಿದೆ. ಒಂದು ವೇಳೆ ಬೆಟ್ಟ ಕುಸಿದು ದುರಂತ ಸಂಭವಿಸಿದರೆ ಜಿಲ್ಲಾಡಳಿತ ಮತ್ತು ಸರ್ಕಾರವೇ ನೇರ ಹೊಣೆ ಹೋರಬೇಕು ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement