Dakshina Kannada
ಅಭಿವೃದ್ಧಿಗಾಗಿ ಖಾತೆ ಬದಲಾವಣೆ: ವಿ. ಸೋಮಣ್ಣ

ಮಡಿಕೇರಿ: ಸಿಎಂ ಯಡಿಯೂರಪ್ಪನವರು ತುಂಬಾ ಅನುಭವಿ ಇದ್ದಾರೆ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಖಾತೆಗಳ ಬದಲಾವಣೆ ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.
ಮಡಿಕೇರಿಯಲ್ಲಿ ನಡೆದ 72 ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಖಾತೆ ಬದಲಾವಣೆಯಿಂದ ಕೆಲವು ಸಚಿವರು ಸಚಿವ ಸ್ಥಾನಕ್ಕೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಭಿವೃದ್ಧಿ ದೃಷ್ಟಿಯಿಂದ ಖಾತೆಗಳ ಬದಲಾವಣೆ ಮಾಡಲಾಗಿದೆ. ಈ ಸಂದರ್ಭ ಸಚಿವರಿಗೆ ಸಣ್ಣಪುಟ್ಟ ಮುನಿಸುಗಳಿರುವುದು ಮತ್ತು ವ್ಯತ್ಯಾಸಗಳಾಗುವುದು ಸಹಜ. ಅದಲ್ಲೆವನ್ನೂ ಸಿಎಂ ಸರಿಮಾಡಲಿದ್ದಾರೆ. ಅವರು ತೆಗೆದುಕೊಳ್ಳುವ ನಿರ್ಧಾರಗಳು ಯಾವಾಗಲೂ ಸರಿಯಾಗಿರುತ್ತವೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಮತ್ತು ಬೆಂಗಳೂರಿನಲ್ಲಿ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ಹಿಂದೆ ಇದ್ದಿದ್ದು ಯಾವುದೋ ಬ್ರಿಟೀಷರ ಕಾಲದ ಕಾಯ್ದೆ ಆಗಿತ್ತು. ಈ ಕಾಯ್ದೆಯಿಂದ ಜನರಿಗೆ ಅನುಕೂಲವಿರಲಿಲ್ಲ, ಆದರೆ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದರಿಂದ ರೈತರಿಗೆ ಅನುಕೂಲವಾಗಲಿದೆ. ಈ ಹಿಂದೆ ಯುಪಿಎ ಸರ್ಕಾರವೇ ಕಾಯ್ದೆ ತಿದ್ದುಪಡಿಗೆ ಮುಂದಾಗಿತ್ತು. ಆದರೆ ಅದನ್ನು ಅವರು ಗೌಣವಾಗಿಟ್ಟರು, ನಮ್ಮ ಸರ್ಕಾರ ಅದನ್ನು ಜಾರಿಗೆ ತಂದಿದೆ. ರೈತರು ಅವರ ಹೋರಾಟವನ್ನು ದಾಖಲಿಸುವುದು ಅವರ ಹಕ್ಕು, ಅದನ್ನು ನಾವು ಬೇಡ ಎನ್ನಲಾಗುವುದಿಲ್ಲ. ಆದರೆ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು ಎನ್ನೋದು ನಮ್ಮ ಇಚ್ಚೆ ಎಂದರು.
