Connect with us

Crime

ಕರ್ನಾಟಕ ಸೇರಿದಂತೆ 600ಕ್ಕೂ ಹೆಚ್ಚು ಯುವತಿಯರ ಬಟ್ಟೆ ಬಿಚ್ಚಿ ವಂಚಿಸಿದ್ದ ಟೆಕ್ಕಿ ಕೊನೆಗೂ ಅರೆಸ್ಟ್

Published

on

ಹೈದರಾಬಾದ್: ಕರ್ನಾಟಕ ಸೇರಿದಂತೆ 16 ರಾಜ್ಯಗಳ 600ಕ್ಕೂ ಹೆಚ್ಚು ಯುವತಿಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಬೆತ್ತಲೆ ಚಿತ್ರಗಳನ್ನು ಸಂಗ್ರಹಿಸಿದ್ದ ಚೆನ್ನೈ ಮೂಲದ ಖತರ್ನಾಕ್ ಟೆಕ್ಕಿಯನ್ನು ಸೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಕ್ಲೆಮಂಟ್ ರಾಜ್ ಅಲಿಯಾಸ್ ಪ್ರದೀಪ್(33) ಬಂಧಿತ ಟೆಕ್ಕಿ. ಸ್ಥಳೀಯ ಯುವತಿ ನೀಡಿದ ದೂರಿನ ಆಧಾರದಲ್ಲಿ ಸೈದರಾಬಾದ್ ಪೊಲೀಸರು ಚೆನ್ನೈಗೆ ತೆರಳಿ ಆತನನ್ನು ಬಂಧಿಸಿದ್ದಾರೆ.

ಚೆನ್ನೈನ ಪ್ರಖ್ಯಾತ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈತ ಫೈವ್ ಸ್ಟಾರ್ ಹೋಟೆಲ್ ಕಂಪನಿಯಲ್ಲಿ ನಕಲಿ ಮಾನವ ಸಂಪನ್ಮೂಲ ಅಧಿಕಾರಿ(ಎಚ್‍ಆರ್) ಎಂದು ನಂಬಿಸಿ ಯುವತಿಯರಿಗೆ ಸಂದರ್ಶನ ಮಾಡುತ್ತಿದ್ದ. ನಂತರ ಯುವತಿಯರ ಖಾಸಗಿ ಫೋಟೋಗಳನ್ನು ಪಡೆದು ಶೋಷಣೆ ಮಾಡುತ್ತಿದ್ದ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಯುವತಿಯರಿಗೆ ಮೋಸ ಮಾಡಿದ್ದ ವಿಚಾರವನ್ನು ಆತ ವಿಚಾರಣೆಯ ಸಂದರ್ಭದಲ್ಲಿ ಬಾಯಿಬಿಟ್ಟಿದ್ದಾನೆ.

ಮದುವೆಯಾಗಿದ್ದ ಪ್ರದೀಪ್ ಸಾಫ್ಟ್ ವೇರ್ ಕಂಪನಿಯಲ್ಲಿ ರಾತ್ರಿ ಪಾಳಿಯಲ್ಲಿ ಉದ್ಯೋಗ ಮಾಡುತ್ತಿದ್ದರೆ ಈತನ ಪತ್ನಿ ಬೆಳಗಿನ ಜಾವ ಉದ್ಯೋಗಕ್ಕೆ ಹೋಗುತ್ತಿದ್ದಳು. ಪತ್ನಿ ಉದ್ಯೋಗಕ್ಕೆ ತೆರಳಿದ ನಂತರ ಪ್ರಸಿದ್ಧ ಇ ಕ್ಲಾಸಿಫೈಡ್ ತಾಣದಲ್ಲಿ ಏಕಾಂಗಿತನವನ್ನು ಕಳೆಯಲು ಯುವತಿಯರ ಫೋನ್ ನಂಬರ್ ಪಡೆದುಕೊಳ್ಳುತ್ತಿದ್ದ. ನಂತರ ತನ್ನ ವಿಕೃತ ಸುಖಕ್ಕಾಗಿ ಅವರಿಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕೃತ್ಯ ಹೇಗೆ ಎಸಗುತ್ತಿದ್ದ?
ದೇಶದ ಪ್ರಸಿದ್ಧ ಫೈವ್ ಸ್ಟಾರ್ ಹೋಟೆಲಿನ ಎಚ್‍ಆರ್ ಎಂದು ಬಿಂಬಿಸಿಕೊಂಡಿದ್ದ ಪ್ರದೀಪ್ ತಾನು ಪಡೆದುಕೊಂಡಿದ್ದ ನಂಬರಿಗೆ ಕರೆ ಮಾಡಿ, ಸುಂದರವಾಗಿರುವ ಯುವತಿಯರನ್ನು ನೇಮಕ ಮಾಡುವಂತೆ ಕಂಪನಿ ಸೂಚಿಸಿದೆ. ಹೀಗಾಗಿ ಸುಂದರವಾಗಿರುವ ಯುವತಿಯರನ್ನು ಸರ್ಚ್ ಮಾಡುತ್ತಿದ್ದಾಗ ನಿಮ್ಮ ನಂಬರ್ ಸಿಕ್ಕಿತು ಎಂದು ಆರಂಭದಲ್ಲಿ ಹೇಳಿ ಸಂದರ್ಶನ ಮಾಡುತ್ತಿದ್ದ. ತನ್ನ ಇಂಗ್ಲಿಷ್ ಸಂವಹನ ಕರೆಗೆ ಯುವತಿಯರು ಬೀಳುತ್ತಿದ್ದಾರೆ ಎನ್ನುವುದು ಖಚಿತವಾಗುತ್ತಿದ್ದಂತೆ ಎರಡನೇ ಹಂತದ ಸಂದರ್ಶನವನ್ನು ನನ್ನ ಮಹಿಳಾ ಸಹೋದ್ಯೋಗಿ ಮಾಡುತ್ತಾರೆ ಎಂದು ನಂಬಿಸಿದ್ದ.

ತನ್ನ ಖೆಡ್ಡಾಗೆ ಯುವತಿಯರು ಬಿದ್ದಿದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆ ಪ್ರದೀಪ್ ಬೇರೆ ಫೋನ್ ನಂಬರ್ ಮೂಲಕ ಕರೆ ಮಾಡಿ, ನಮ್ಮ ಕಂಪನಿ ವಿಶೇಷವಾಗಿ ಯುವತಿಯರ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಹೀಗಾಗಿ ನಿಮ್ಮ ದೇಹದ ಸಂಪೂರ್ಣ ವಿಡಿಯೋ ಕಳುಹಿಸಿ ಎಂದು ಕೇಳುತ್ತಿದ್ದ. ಇದಾದ ಬಳಿಕ ವಾಟ್ಸಪ್ ವಿಡಿಯೋ ಕಾಲ್ ಮಾಡಿ ದೇಹದ ಬಟ್ಟೆಯನ್ನು ತೆಗೆಯುವಂತೆ ಹೇಳುತ್ತಿದ್ದ. ಯುವತಿಯರು ದೇಹದ ವಸ್ತ್ರವನ್ನು ತೆಗೆಯುತ್ತಿರುವುದನ್ನು ಸಾಫ್ಟ್ ವೇರ್ ಮೂಲಕ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ.

ಫೋಟೋ ಮತ್ತು ವಿಡಿಯೋವನ್ನು ಗ್ಯಾಲರಿಯಲ್ಲಿ ಪಾಸ್‍ವರ್ಡ್ ಹಾಕಿ ಸೇವ್ ಮಾಡುತ್ತಿದ್ದ. ಈಗ ಆತನ ಬಳಿಯಿದ್ದ ಮೊಬೈಲ್ ಫೋನನ್ನು ಹೆಚ್ಚಿನ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತಿದ್ದೇವೆ. ವಂಚನೆಗೆ ಒಳಗಾದ ಯುವತಿಯರಿಂದ ಲಕ್ಷಗಟ್ಟಲೇ ಅಧಿಕ ಹಣವನ್ನು ಸಂಪಾದಿಸಿದ್ದಾನೆ. ವಿಚಾರಣೆಯ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.