Monday, 15th July 2019

ಗುಡ್ ನ್ಯೂಸ್… ಎಲ್‍ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ

ನವದೆಹಲಿ: ಗೃಹ ಬಳಕೆ ಅಡುಗೆ ಅನಿಲ (ಎಲ್‍ಪಿಜಿ) ದರದಲ್ಲಿ ಮತ್ತೆ ಇಳಿಕೆಯಾಗಿದ್ದು, ಸಬ್ಸಿಡಿ ಸಹಿತ ಸಿಲಿಂಡರ್‌ಗೆ 1.46 ರೂ. ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ದರದಲ್ಲಿ 30 ರೂ. ಕಡಿತವಾಗಿದೆ.

ಗುರುವಾರ ರಾತ್ರಿಯಿಂದ ಈ ಹೊಸ ದರ ಅನ್ವಯವಾಗಲಿದೆ. ಇದರಿಂದಾಗಿ ದೆಹಲಿಯಲ್ಲಿ ಪ್ರತಿ 14.2 ಕೆಜಿ ಸಿಲಿಂಡರ್ ದರ ಗುರುವಾರ 494.99 ರೂ. ಇದ್ದರೆ ಮಧ್ಯರಾತ್ರಿಯಿಂದ 493.53 ರೂ. ಆಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 30 ರೂ. ಇಳಿಕೆಯಾಗಿದ್ದು, ದೆಹಲಿಯಲ್ಲಿ 689 ರೂ. ಸಿಗುತ್ತಿದ್ದ 14.2 ಕೆಜಿ ಸಿಲಿಂಡರ್ ಈಗ 659 ರೂ.ಗೆ ಸಿಗಲಿದೆ.

2018ರ ಜೂನ್‍ನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ಸತತ 6 ಬಾರಿ ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆ 14.13 ರೂ. ಹೆಚ್ಚಳವಾಗಿತ್ತು. ಆದರೆ ಕಳೆದ ಎರಡು ತಿಂಗಳಲ್ಲಿ ಗೃಹ ಬಳಕೆ ಅಡುಗೆ ಅನಿಲ (ಎಲ್‍ಪಿಜಿ) ದರವು ಮೂರು ಬಾರಿ ಇಳಿಕೆ ಕಂಡಿದ್ದು, ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ.

2018ರ ಡಿಸೆಂಬರ್ ತಿಂಗಳಲ್ಲಿ ಸಬ್ಸಿಡಿ ಸಹಿತ ಅಡುಗೆ ಅನಿಲ ದರವನ್ನು 2ನೇ ಬಾರಿ ಇಳಿಕೆ ಮಾಡಲಾಗಿತ್ತು. ಡಿಸೆಂಬರ್ 1ರಂದು 6.52 ರೂ. ಕಡಿತಗೊಳಿಸಿತ್ತು. ಜನವರಿ 1ರಂದು 5.91 ರೂ. ಇಳಿಕೆ ಮಾಡಿತ್ತು. ಹೀಗಾಗಿ ಒಂದೇ ತಿಂಗಳಿನಲ್ಲಿ 12.43 ರೂ. ಕಡಿಮೆ ಆಗಿತ್ತು. 2018ರ ಡಿಸೆಂಬರ್ 1ರಂದು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 133 ರೂ ಇಳಿಕೆಯಾಗಿದ್ದರೆ ಜನವರಿ 1ರಂದು 120.50 ರೂ. ಇಳಿಕೆಯಾಗಿತ್ತು.

ಜನವರಿ ತಿಂಗಳಿನಲ್ಲಿ ಸಬ್ಸಿಡಿ ಸಹಿತ ಸಿಲಿಂಡರ್ ಪಡೆಯುವ ಗ್ರಾಹಕರ ಖಾತೆಗೆ 194.01 ರೂ. ಜಮೆಯಾಗಿದ್ದರೆ, ಫೆಬ್ರವರಿಯಲ್ಲಿ 165.47 ರೂ. ಜಮೆಯಾಗಲಿದೆ. ಸರ್ಕಾರ ಈಗ ಒಂದು ಕುಟುಂಬಕ್ಕೆ 14.2 ಕೆಜಿ ತೂಕದ ಗರಿಷ್ಟ 12 ಎಲ್‍ಪಿಜಿ ಸಿಲಿಂಡರ್ ಗಳನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‍ಪಿಜಿ ದರ ಮತ್ತು ವಿದೇಶಿ ವಿನಿಮಯ ದರವನ್ನು ನೋಡಿಕೊಂಡು ಪ್ರತಿ ತಿಂಗಳು ಭಾರತದಲ್ಲಿ ಎಲ್‍ಪಿಜಿ ಸಿಲಿಂಡರ್ ಗಳ ದರ ಪರಿಷ್ಕರಣೆಯಾಗುತ್ತದೆ. ಬೆಲೆ ಏರಿಕೆಯಾದಾಗ ಸರ್ಕಾರ ಸಬ್ಸಿಡಿಯನ್ನು ಏರಿಕೆ ಮಾಡುತ್ತದೆ. ದರ ಇಳಿಕೆಯಾದಾಗ ಸಬ್ಸಿಡಿ ದರವನ್ನು ಇಳಿಕೆ ಮಾಡುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Leave a Reply

Your email address will not be published. Required fields are marked *