Connect with us

ಪ್ರೀತಿಗೆ ಒಪ್ಪದ ಯುವತಿಗೆ ಚಾಕು ಇರಿತ – ಅಪರಾಧಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಪ್ರೀತಿಗೆ ಒಪ್ಪದ ಯುವತಿಗೆ ಚಾಕು ಇರಿತ – ಅಪರಾಧಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಹುಬ್ಬಳ್ಳಿ: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ಯುವಕನಿಗೆ ಹುಬ್ಬಳ್ಳಿಯ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣ ಹಿನ್ನೆಲೆ: ಜಿಲ್ಲೆಯ ವೆಂಕಟೇಶ್ವರ ನಗರದ ಮೇಘನಾ ಚಂದ್ರಶೇಖರ್ ಜಾಳಗಿ ಎಂಬವರಿಗೆ ರಾಯಚೂರು ಮೂಲದ ಅಭಿನವ್ ಕುಲಕರ್ಣಿ ಎಂಬ ಯುವಕ ಫೋನ್ ಹಾಗೂ ಮೆಸೆಜ್ ಮಾಡಿ ತನ್ನ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಯುವತಿ ಪ್ರೀತಿ ಮಾಡಲು ಒಪ್ಪದ್ದರಿಂದ ಯುವಕ ಇದೇ ಸಿಟ್ಟಿನಿಂದಾಗಿ 2015ರ ನವಂಬರ್ 29 ರಂದು ಹುಬ್ಬಳ್ಳಿ ಗೋಕುಲ್ ರೋಡ ಅರ್ಬನ್ ಓಯಾಸಿಸ್ ಮಾಲ್‍ನಲ್ಲಿ ಯುವತಿಗೆ ಚಾಕುವಿನಿಂದ ಕುತ್ತಿಗೆಗೆ ಹಾಗೂ ಹೊಟ್ಟೆಗೆ ಇರಿದು ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ, ತಾನು ಸಹ ಅದೇ ಚಾಕುವಿನಿಂದ ತನ್ನ ಕುತ್ತಿಗೆ ಹಾಗೂ ಹೊಟ್ಟೆಗೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದನು.

ಈ ಬಗ್ಗೆ ಹುಬ್ಬಳ್ಳಿ ಗೋಕುಲ್ ರೋಡ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆಃ 140/2015 ಕಲಂ: 307, 354 (ಡಿ) (1), 309 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ಆಗ ಕರ್ತವ್ಯದ ಮೇಲಿದ್ದ ಗೋಕುಲ್ ರೋಡ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಎಸ್.ಕೆ. ಕುರಗೋಡಿರವರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡು ಆರೋಪಿತನಿಗೆ ದಸ್ತಗೀರ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದರು. ಆರೋಪಿತನ ಮೇಲೆ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಸದರಿಯವನ ಮೇಲೆ ದಿನಾಂಕಃ 23-03-2016 ರಂದು ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಸದರಿ ಪ್ರಕರಣವು ಮಾನ್ಯ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹುಬ್ಬಳ್ಳಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿತನ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಿನಾಂಕಃ 08-03-2021ರಂದು ನ್ಯಾಯಾಧೀಶರಾದ ಗಂಗಾಧರ ಕೆ ಎನ್ ರವರು

1. ಕಲಂ: 307 ಐಪಿಸಿ ಅಡಿಯಲ್ಲಿ 7 ವರ್ಷ ಕಠಿಣ ಶಿಕ್ಷೆ ಒಂದು ಲಕ್ಷ ರೂಪಾಯಿ ಜುಲ್ಮಾನೆ, ಜುಲ್ಮಾನೆ ಕಟ್ಟದಿದ್ದಲ್ಲಿ ಎರಡು ವರ್ಷ ಸಾದಾ ಶಿಕ್ಷೆ.

2. ಕಲಂ: 354 (ಡಿ) (1) ಐಪಿಸಿ ಅಡಿಯಲ್ಲಿ ಒಂದುವರೆ ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ, ದಂಡ ತುಂಬದಿದ್ದಲ್ಲಿ 6 ತಿಂಗಳು ಸಾದಾ ಶಿಕ್ಷೆ.

3. ಕಲಂ: 309 ಐಪಿಸಿ ಅಡಿಯಲ್ಲಿ 6 ತಿಂಗಳು ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ, ದಂಡ ತುಂಬದಿದ್ದಲ್ಲಿ 1 ತಿಂಗಳು ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಯುವತಿ ಪರವಾಗಿ ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿ ವಾದ ಮಂಡಿಸಿದರು.

Advertisement
Advertisement