Connect with us

Crime

ತನ್ನ ಪ್ರೀತಿ ಸಾಬೀತುಪಡಿಸಲು ಮಾಜಿ ಗೆಳತಿಯ ಕೊಂದ- ಪೊದೆಯಲ್ಲಿ ಅವಿತುಕೊಂಡ್ರೂ ಬಿಡ್ಲಿಲ್ಲ

Published

on

– ಸ್ನೇಹಿತನಿಗೆ ಫೋನ್ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ಳು
– ಕುಡಿದ ಮತ್ತಿನಲ್ಲಿ ತಮಾಷೆ ಮಾಡಿದ್ದಾಳೆ ಅಂದ್ಕೊಂಡ

ಮಾಸ್ಕೋ: ಯುವಕನೊಬ್ಬ ಪ್ರಿಯತಮೆಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸುವ ಸಲುವಾಗಿ ಮಾಜಿ ಗೆಳತಿಯನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

ನೋವೊಸಿಬಿರ್ಸ್ಕ್ ಪ್ರದೇಶದ ಸುಜುನ್ ಗ್ರಾಮದ ಬಳಿ ಈ ಹತ್ಯೆ ನಡೆದಿದೆ. ಅನಸ್ತಾಸಿಯಾ ಪೊಸ್ಪೆಲೋವಾ ಕೊಲೆಯಾದ ಮಾಜಿ ಗೆಳತಿ. ಆರೋಪಿ ಅಲೆಕ್ಸೆ ಪೆಟ್ರೋವ್ (20) ತನ್ನ ಪ್ರೀತಿಯನ್ನು ಪ್ರಿಯತಮೆಯ ಮುಂದೆ ಸಾಬೀತು ಪಡಿಸಲು ಕಾಡಿನಲ್ಲಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಆರೋಪಿ ಪೆಟ್ರೋವ್ ಮತ್ತು ಮೃತ ಅನಸ್ತಾಸಿಯಾ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಇದಾದ ಬಳಿಕ ಆರೋಪಿ ಕಾರ್ಪೋವಾಳನ್ನು ಪ್ರೀತಿಸುತ್ತಿದ್ದನು. ಜೂನ್ 14 ರಂದು ಈ ಜೋಡಿ ಅನಸ್ತಾಸಿಯಾಳನ್ನು ಪಾರ್ಟಿಗೆ ಬರುವಂತೆ ಕರೆದಿದ್ದಾರೆ. ಅದಕ್ಕೆ ಅನಸ್ತಾಸಿಯಾ ಕೂಡ ಒಪ್ಪಿದ್ದು, ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಎಲ್ಲರೂ ಮದ್ಯಪಾನ ಮಾಡಲು ಪ್ರಾರಂಭಿಸಿದರು.

ಇದೇ ವೇಳೆ ಆರೋಪಿ ಪೆಟ್ರೋವ್ ತನ್ನ ಜೇಬಿನಿಂದ ಚಾಕುವನ್ನು ತೆಗೆದು ಅನಸ್ತಾಸಿಯಾಳ ಕುತ್ತಿಗೆಗೆ ಹಲವಾರು ಬಾರಿ ಇರಿದಿದ್ದಾನೆ. ಇದರಿಂದ ಭಯಭೀತಳಾದ ಅನಸ್ತಾಸಿಯಾ ಆರೋಪಿ ಪೆಟ್ರೋವ್‍ನನ್ನು ತಳ್ಳಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಆದರೆ ಚಾಕುವಿನಿಂದ ಇರಿದಿದ್ದರಿಂದ ಗಾಯಗಳಾಗಿ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಆಕೆ ಕಾಡಿನಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಗ ಅನಸ್ತಾಸಿಯಾ ಸಹಾಯಕ್ಕಾಗಿ ತನ್ನ ಸ್ನೇಹಿತನಿಗೆ ಫೋನ್ ಮಾಡಿದ್ದು, ನನಗೆ ಸಹಾಯ ಮಾಡು, ನಾನು ಕಾಡಿನಲ್ಲಿದ್ದೇನೆ. ನನ್ನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಇವರು ನನ್ನನ್ನು ಕೊಲೆ ಮಾಡುತ್ತಾರೆ. ದಯವಿಟ್ಟು ನನಗೆ ಸಹಾಯ ಮಾಡು ಎಂದು ಅಂಗಲಾಚಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಡಿದ ಮತ್ತಿನಲ್ಲಿ ತಮಾಷೆ ಮಾಡುತ್ತಿದ್ದಾಳೆ ಎಂದು ಸ್ನೇಹಿತ ನಂಬಲಿಲ್ಲ. ಕೊನೆಗೆ ಅನಸ್ತಾಸಿಯಾ ಕಾಡಿನಲ್ಲಿ ಪೊದೆಯೊಳಗೆ ಅಡಗಿಕೊಂಡಳು. ಆದರೆ ಆರೋಪಿ ಪೆಟ್ರೋವ್ ಆಕೆಯನ್ನ ಪತ್ತೆ ಮಾಡಿ ಅವಳ ಕುತ್ತಿಗೆಯ ಮೇಲೆ ಕಾಲಿಟ್ಟು, ಚಾಕುವಿನಿಂದ ಎದೆಗೆ ಚುಚ್ಚಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆರೋಪಿ ಮತ್ತು ಆಕೆಯ ಗೆಳತಿ ಕಾರ್ಪೋವಾ ಶವವನ್ನು ಪೊದೆಗಳಲ್ಲಿ ಅಡಗಿಸಿ ವಾಪಸ್ ಆಗಿದ್ದಾರೆ. ನಂತರ ಅವರೇ ಅನಸ್ತಾಸಿಯಾ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ತಮ್ಮ ಮೇಲೆ ಅನುಮಾನ ಬರಬಾರದೆಂದು ಪೊಲೀಸರ ಜೊತೆ ಅನಸ್ತಾಸಿಯಾಗಾಗಿ ಹುಡುಕಾಡಿದ್ದಾರೆ. ಇತ್ತೀಚೆಗೆ ನಂತರ ಗಾಯಗೊಂಡ ಮೃತಪಟ್ಟಿರುವ ಯುವತಿಯ ಶವ ಕಾಡಿನ ಪೊದೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಅನುಮಾನದ ಮೇರೆಗೆ ಇಬ್ಬರನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ಆಗ ಇಬ್ಬರು ಈ ಕೊಲೆಯನ್ನು ತಾವೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿ ಕಾರ್ಪೋವಾ, ಅನಸ್ತಾಸಿಯಾ ಮತ್ತು ಪೆಟ್ರೋವ್ ಸಂಬಂಧದ ಬಗ್ಗೆ ಅಸೂಯೆ ಪಟ್ಟಿದ್ದಳು. ಇದೇ ವಿಚಾರಕ್ಕೆ ಪೆಟ್ರೋವ್ ಜೊತೆ ಜಗಳ ಮಾಡುತ್ತಿದ್ದಳು. ಅಲ್ಲದೇ ಪೆಟ್ರೋವ್‍ಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಮತ್ತು ಈ ಜಗಳವನ್ನು ನಿಲ್ಲಿಸಲು ಅನಸ್ತಾಸಿಯಾಳನ್ನು ಕೊಲೆ ಮಾಡಬೇಕು ಎಂದು ಹೇಳಿದ್ದಾಳೆ. ಆಗ ಆರೋಪಿ ತನ್ನ ಪ್ರೀತಿಯನ್ನು ಸಾಬೀತು ಮಾಡಲು ಮಾಜಿ ಗೆಳತಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯಕ್ಕೆ ಆರೋಪಿ ಪೆಟ್ರೋವ್ ಮತ್ತು ಕಾರ್ಪೋವಾ ವಿರುದ್ಧ ಕ್ರಿಮಿನಲ್ ಕ್ರೇಸ್ ದಾಖಲಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ.