Connect with us

Bengaluru City

ಪ್ರೇಮಿಗಳ ಕಿತ್ತಾಟ ಪ್ರೇಯಸಿ ಕೊಲೆಯಲ್ಲಿ ಅಂತ್ಯ – ಪೊಲೀಸರಿಗೆ ಶರಣಾದ ಪ್ರಿಯತಮ

Published

on

ಬೆಂಗಳೂರು: ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯತಮೆಯನ್ನೇ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತಹಳ್ಳಿಯಲ್ಲಿ ತಡವಾಗಿ ಬೆಳಕಿಗೆ.

ನಯನಾ (25) ಕೊಲೆಯಾದ ಯುವತಿ. ಕೊಲೆ ಮಾಡಿದ ಬಳಿಕ ಆರೋಪಿ ತಿಪ್ಪೇಸ್ವಾಮಿ ಪೊಲೀಸರಿಗೆ ಶರಣಾಗಿದ್ದಾನೆ.

ಚಿಕ್ಕಮಗಳೂರಿನ ತರೀಕೆರೆ ಮೂಲದ ನಯನಾ ದಿನಸಿ ಸಾಮಗ್ರಿ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದಳು. ಪಾವಗಡ ಮೂಲದ ತಿಪ್ಪೇಸ್ವಾಮಿ ಕ್ಯಾಬ್ ಚಾಲಕನಾಗಿದ್ದನು. ತಿಪ್ಪೇಸ್ವಾಮಿಗೆ 8 ತಿಂಗಳ ಹಿಂದೆ ನಯನಾ ಪರಿಚಯವಾಗಿದೆ. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿದ್ದು, ಬಳಿಕ ನಾಲ್ಕು ತಿಂಗಳಿಂದ ಸಹಜೀವನ (living together) ನಡೆಸುತ್ತಿದ್ದರು.

ಇತ್ತೀಚೆಗೆ ನಯನಾ ಬೇರೆ ಹುಡುಗನ ಜೊತೆ ಮೊಬೈಲಿನಲ್ಲಿ ಮಾತನಾಡುತ್ತಿದ್ದು, ಮೆಸೇಜ್ ಮಾಡುತ್ತಿದ್ದಳು. ಮೇ 19ರ ರಾತ್ರಿ ಈ ಬಗ್ಗೆ ತಿಪ್ಪೇಸ್ವಾಮಿ ವಿಚಾರಿಸಿದ್ದಾನೆ. ಆಗ ಇಬ್ಬರ ನಡುವೆ ಗಲಾಟೆ ನಡೆದಿದೆ. ಇದೇ ವೇಳೆ ಆರೋಪಿ ನಾವಿಬ್ಬರು ಮದುವೆಯಾಗೋಣ ಅಂತ ನಯನಾಗೆ ಕೇಳಿದ್ದನು. ಆಗ ತಾನು ಮತ್ತೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ನಿನ್ನನ್ನು ಮದುವೆಯಾಗುವುದಿಲ್ಲ ಎಂದು ನಯನಾ ಹೇಳಿದ್ದಾಳೆ. ಇದರಿಂದ ಕೋಪಗೊಂಡ ತಿಪ್ಪೇಸ್ವಾಮಿ ಚಾಕುವಿನಿಂದ ನಯನಾ ಮೇಲೆ ಹಲ್ಲೆ ಮಾಡಿದ್ದಾನೆ.

ನಯನಾ ಕೂಡ ದೋಸೆ ತವಾದಿಂದ ತಿಪ್ಪೇಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಆರೋಪಿ ಅದೇ ತವಾದಿಂದ ನಯನಾಳ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.

ಹತ್ಯೆ ಬಳಿಕ ತಿಪ್ಪೆಸ್ವಾಮಿ ಮಾರತಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಬಗ್ಗೆ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.