Connect with us

Crime

ಪ್ರಿಯತಮೆಯ ಹುಡ್ಗನಿಗೆ ಮದ್ವೆ ಫೋಟೋ ಕಳುಹಿಸಿದ ಪ್ರೇಮಿ- ಯುವತಿ ಆತ್ಮಹತ್ಯೆ

Published

on

– ಲಾಕ್‍ಡೌನ್‍ಗೂ ಮುನ್ನ ರಹಸ್ಯವಾಗಿ ಪ್ರಿಯಕರನೊಂದಿಗೆ ವಿವಾಹ

ಹೈದರಾಬಾದ್: ಮದುವೆ ಫೋಟೋಗಳು ವಾಟ್ಸಪ್‍ನಲ್ಲಿ ವೈರಲ್ ಆದ ನಂತರ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತೆಲಂಗಾಣದ ರಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಶ್ರಾವಂತಿ (23) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಹಾಬೂಬ್‍ನಗರದಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿದ್ದಳು. ರಂಗರೆಡ್ಡಿ ಜಿಲ್ಲೆಯ ಗ್ರಾಮವೊಂದರ ತಿರುಪತಿ ಎಂಬಾತನನ್ನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಲಾಕ್‍ಡೌನ್‍ಗೂ ಮುನ್ನ ಶ್ರಾವಂತಿ ಮತ್ತು ತಿರುಪತಿ ದೇವಾಲಯದಲ್ಲಿ ರಹಸ್ಯವಾಗಿ ವಿವಾಹವಾಗಿದ್ದರು. ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ.

ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ ನಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿತ್ತು. ಆಗ ಶಾಲಾ, ಕಾಲೇಜು ಎಲ್ಲವೂ ಮುಚ್ಚಿದ್ದವು. ಹೀಗಾಗಿ ಶ್ರಾವಂತಿ ಪೋಷಕರು ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದರು. ಲಾಕ್‍ಡೌನ್‍ನಿಂದಾಗಿ ಶ್ರಾವಂತಿ ಮತ್ತು ತಿರುಪತಿ ಇಬ್ಬರು ಭೇಟಿ ಮಾಡಲು ಸಾಧ್ಯವಾಗಿಲ್ಲ. ಇತ್ತ ಮನೆಯಲ್ಲಿ ಶ್ರಾವಂತಿಗೆ ಮದುವೆ ಮಾಡಲು ಕರ್ನಾಟಕದ ಹುಡುಗನನ್ನು ನೋಡಿದ್ದರು. ಅಲ್ಲದೇ ಇದೇ ತಿಂಗಳ 30ರಂದು ಮದುವೆ ಮಾಡಲು ಪ್ಲಾನ್ ಮಾಡಿಕೊಂಡಿದ್ದರು.

ಮದುವೆ ವಿಚಾರವನ್ನು ತಿಳಿದ ಪ್ರಿಯಕರ ತಮ್ಮ ಮದುವೆಯ ಫೋಟೋಗಳನ್ನು ಮೊದಲಿಗೆ ಶ್ರಾವಂತಿಗೆ ನಿಶ್ಚಯವಾಗಿದ್ದ ಹುಡುಗನ ವಾಟ್ಸಪ್‍ಗೆ ಕಳುಹಿಸಿದ್ದಾನೆ. ನಂತರ ಕುಟುಂಬದವರ ವಾಟ್ಸಪ್ ಗ್ರೂಪ್‍ಗೆ ಕಳುಹಿಸಿದ್ದಾನೆ. ಫೋಟೋಗಳನ್ನು ನೋಡಿ ಹುಡುಗನ ಮನೆಯವರು ಶ್ರಾವಂತಿ ಮನೆಗೆ ಬಂದು ಜಗಳ ಮಾಡಿದ್ದಾರೆ. ಇದರಿಂದ ಅವಮಾನವಾಯಿತು ಎಂದು ಶ್ರಾವಂತಿ ಕೀಟನಾಶಕ ಔಷಧಿಯನ್ನು ಸೇವಿಸಿದ್ದಾಳೆ.

ಕುಟುಂಬದವರು ನೋಡಿ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಶ್ರಾವಂತಿ ಮೃತಪಟ್ಟಿದ್ದಳು. ಶ್ರಾವಂತಿ ತಂದೆ ನೀಡಿದ ದೂರಿನ ಮೇರೆಗೆ ಪ್ರಿಯಕರ ತಿರುಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.