Connect with us

Districts

‘ಚೆಲುವಿನ ಚಿತ್ತಾರ’ ಸಿನಿಮಾ ರೀತಿಯಲ್ಲಿ ಲವ್ – ಕೊನೆಗೂ ಒಂದಾದ ಪ್ರೇಮಿಗಳು

Published

on

ಕಾರವಾರ: ‘ಚೆಲುವಿನ ಚಿತ್ತಾರ’ ಸಿನಿಮಾ ಲವ್ ಸ್ಟೋರಿಯಂತೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಐದು ವರ್ಷದ ಪ್ರೀತಿಗೆ ಜಾತಿ ಅಡ್ಡವಾಗಿದ್ದರೂ ಪ್ರೇಮಿಗಳು ಮದುವೆಯಾಗಿದ್ದಾರೆ.

ಕುಮಟಾದ ಧನುಷ್ (24) ಮತ್ತು ಸೀತಾ (23) ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು. ಧನುಷ್ ಗ್ಯಾರೇಜ್‍ನಲ್ಲಿ ಕೆಲಸ ಮಾಡುತ್ತಿದ್ದನು. ಗ್ಯಾರೇಜಿನ ಸಮೀಪದಲ್ಲಿದ್ದ ಮನೆಯಲ್ಲಿ ಸೀತಾ ವಾಸಿಸುತ್ತಿದ್ದು, ಪ್ರತಿದಿನ ಕಾಲೇಜಿಗೆ ಹೋಗುತ್ತಿದ್ದಳು. ಈ ವೇಳೆ ಇಬ್ಬರ ನಡುವೆ ಪ್ರೀತಿ ಬೆಳೆದಿದೆ.

ವಿದ್ಯಾಭ್ಯಾಸ ಮುಗಿಸಿದ ಸೀತಾ ಕುಮಟಾದ ಹೆಚ್.ಡಿ.ಎಫ್.ಸಿ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರುತ್ತಾಳೆ. ಅಷ್ಟರಲ್ಲಾಗಲೇ ಯುವತಿ ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿರುವುದು ಕುಟುಂಬಕ್ಕೆ ತಿಳಿದಿದೆ. ಆಗ ಹುಡುಗ ಬೇರೆ ಜಾತಿಯಾಗಿದ್ದರಿಂದ ಮದುವೆಗೆ ನಿರಾಕರಿಸಿ ಕೆಲಸ ಬಿಡಿಸಿ ಮನೆಯಲ್ಲಿ ಕೂಡಿಹಾಕಿದ್ದರು. ಆದರೂ ಆತನನ್ನೇ ಮದುವೆಯಾಗಬೇಕು ಎಂದು ಹಠ ಹಿಡಿದು ಸೀತಾ ಮನೆಯಿಂದ ತಪ್ಪಿಸಿಕೊಂಡು ಯುವಕನೊಂದಿಗೆ ಊರು ಬಿಟ್ಟು ಓಡಿಹೋಗಿದ್ದಳು.

ಸೀತಾ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಇಬ್ಬರನ್ನೂ ಕರೆಯಿಸಿ ಯುವಕನಿಗೆ ಧಮ್ಕಿ ಹಾಕಿದ್ದಾರೆ. ಆಗ ಸೀತಾಳನ್ನು ಸ್ವೀಕಾರ ಕೇಂದ್ರಕ್ಕೆ ಸೇರಿಸಿದ್ದಾರೆ. ಅಲ್ಲದೇ ತಮ್ಮ ಮಗಳು ಬೇರೆ ಜಾತಿಯ ಯುವಕನನ್ನು ಮದುವೆಯಾಗುವುದನ್ನು ಸಹಿಸದ ಪೋಷಕರು ಈ ವೇಳೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಅದಕ್ಕಾಗಿ ಸ್ವೀಕಾರ ಕೇಂದ್ರದಿಂದ ಮಗಳನ್ನು ಕರೆತಂದು ಮನೆಯಲ್ಲಿ ಬಂಧಿಸಿ, ಬಲವಂತದ ಮದುವೆ ಮಾಡಿಸಲು ಪ್ರಯತ್ನ ಮಾಡಿದ್ದಾರೆ.

ಸೀತಾ ಮತ್ತೆ ಮನೆಯಿಂದ ತಪ್ಪಿಸಿಕೊಂಡು ಬಂದು ಇಂದು ಕಾರವಾರದ ಜನಶಕ್ತಿ ವೇದಿಕೆಯ ಮಾಧವ ನಾಯ್ಕ ಸಹಾಯ ಪಡೆದು ಶೇಜವಾಡದ ಶೆಜ್ಜೇಶ್ವರ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾದವನಾಯ್ಕ ಯುವತಿಯ ತಂದೆಯ ಸ್ಥಾನದಲ್ಲಿ ನಿಂತು ವಧುವನ್ನು ಧಾರೆ ಎರೆದಿದ್ದಾರೆ.