Crime
ಆಸ್ಪತ್ರೆಗೆ ಹೊರಟವರು ಸಾವಿನ ಮನೆ ಸೇರಿದ್ರು

– ಕಬ್ಬಿನ ಲಾರಿಗೆ ಕಾರ್ ಡಿಕ್ಕಿ, 3 ಸಾವು
ಧಾರವಾಡ: ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ಹೊರವಲಯದ ಸವದತ್ತಿ ರಸ್ತೆಯಲ್ಲಿ ನಡೆದಿದೆ.
ಕಾರ್ ಸವದತ್ತಿಯಿಂದ ಹುಬ್ಬಳ್ಳಿ ಕಡೆಗೆ ಹೊರಟಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಲಾರಿಗೆ ಡಿಕ್ಕಿ ಹೊಡೆದಿದೆ. ಸಾವನ್ನಪ್ಪಿದವರು ಮೂವರು ಸವದತ್ತಿ ಮೂಲದವರು ಎಂದು ತಿಳಿದು ಬಂದಿದ್ದು, ರೇವಣಸಿದ್ಧಯ್ಯ ಇಚ್ಚಂಗಿ (46), ವಿಜಯಾ ಇಚ್ಚಂಗಿ (42) ಹಾಗೂ ನಾಗರಾಜರ್ ಇಚ್ಚಂಗಿ (35) ಮೃತ ದುರ್ದೈವಿಗಳು. ರೇವಣಸಿದ್ಧಯ್ಯಗೆ ಹುಬ್ಬಳ್ಳಿಗೆ ಡಯಾಲಿಸಿಸ್ ಮಾಡಿಸಲು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಈ ಅಪಘಾತ ಸಂಭವಿಸಿದೆ.
ಮೃತ ರೇವಣಸಿದ್ಧಯ್ಯ ಹಾಗೂ ವಿಜಯಾ ಪತಿ ಪತಿಯಾಗಿದ್ದು, ನಾಗರಾಜ್ ರೇವಣಸಿದ್ಧಯ್ಯ ಸಹೋದರನಾಗಿದ್ದಾರೆ. ರೇವಣಸಿದ್ಧಯ್ಯ ಸವದತ್ತಿಯಲ್ಲಿ ಫೋಟೋಗ್ರಾಫರ ಕೆಲಸ ಮಾಡುತ್ತಿದ್ದರು. ಸದ್ಯ ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ, ಕಾರಿನಲ್ಲಿದ್ದ ಶವಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
