Saturday, 7th December 2019

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ ಜಗತ್ತಿನ ಅತೀ ಎತ್ತರದ ರಾಮನ ಪ್ರತಿಮೆ

ಲಕ್ನೋ: ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಜಗತ್ತಿನ ಅತೀ ಎತ್ತರದ 251 ಮೀಟರ್ ಎತ್ತರದ ರಾಮನ ಪ್ರತಿಮೆ ನಿರ್ಮಿಸಲು ಸರ್ಕಾರ ಮುಂದಾಗಿದೆ.

ಪ್ರತಿಮೆಯನ್ನು 100 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲು ಅಲ್ಲಿನ ಸರ್ಕಾರ ಒಪ್ಪಿಗೆ ನೀಡಿದೆ. ಈ ಸಂಬಂಧ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯ ಸಂಪೂರ್ಣ ಅಭಿವೃದ್ಧಿಗೆ ಅಗತ್ಯವಾದ ಯೋಜನೆಯನ್ನು ಸರ್ಕಾರ ರೂಪಿಸಲಿದೆ ಎಂದಿದ್ದಾರೆ.

ಲಕ್ನೋದಲ್ಲಿ ಸೋಮವಾರ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಗುಜರಾತ್‍ನಲ್ಲಿನ ಸರ್ದಾರ್ ವಲ್ಲಭಾಬಾಯಿ ಪಟೇಲ್ ಪುತ್ಥಳಿಯು(ಏಕತಾ ಪ್ರತಿಮೆ) 183 ಮೀ ಎತ್ತರವಾಗಿದ್ದು, ಇದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿದೆ. ಹೀಗಾಗಿ ಏಕತಾ ಪ್ರತಿಮೆಯನ್ನು ನಿರ್ಮಿಸಿದ ಹಾಗೆಯೇ ಉತ್ತರ ಪ್ರದೇಶದಲ್ಲಿ ಶ್ರೀರಾಮನ ಅತೀ ಎತ್ತರದ ಪ್ರತಿಮೆ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ.

ಪ್ರತಿಮೆ ನಿರ್ಮಾಣಕ್ಕೆ ತಾಂತ್ರಿಕ ಸಹಾಯವನ್ನು ಗುಜರಾತ್ ಸರ್ಕಾರದಿಂದ ಪಡೆಯಲಾಗುತ್ತದೆ. ಪ್ರತಿಮೆ ವೀಕ್ಷಿಸಿಲು ಬರುವ ಪ್ರವಾಸಿಗರಿಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಪಾರ್ಕಿಂಗ್, ವಾಚನಾಲಯ, ಆಹಾರ ವ್ಯವಸ್ಥೆ, ಮ್ಯೂಸಿಯಂ ಸೇರಿದಂತೆ ಇನ್ನಿತರ ಎಲ್ಲ ಅಗತ್ಯ ಸೌಕರ್ಯವನ್ನು ಪೂರೈಸಲು ಸರ್ಕಾರ ಯೋಜನೆ ರೂಪಿಸುತ್ತದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಕಾನ್ಪುರ ಐಐಟಿ ಹಾಗೂ ನಾಗ್ಪುರದ ರಾಷ್ಟ್ರೀಯ ಎನ್ವಿರಾನ್ಮೆಂಟ್ ಎಂಜಿನಿಯರಿಂಗ್ ರಿಸರ್ಚ್ ಇನ್‍ಸ್ಟಿಟ್ಯೂಟ್‍ನಿಂದ ಈ ಬಗ್ಗ ಕಾರ್ಯಸಾಧ್ಯತಾ ವರದಿ ಹಾಗೂ ಜಮೀನು ಸರ್ವೇ ಇತ್ಯಾದಿಗಳನ್ನು ನಡೆಸಲಿದೆ. ಹಾಗೆಯೇ ಈ ಯೋಜನೆಗಾಗಿಯೇ ಸ್ಟೇಟ್ ಮ್ಯಾನ್ಯುಫ್ಯಾಕ್ಟರಿಂಗ್ ಕಾರ್ಪೊರೇಷನ್ ಎಂಬ ಪ್ರತ್ಯೇಕ ವಿಭಾಗ ಸ್ಥಾಪಿಸಲಾಗುತ್ತದೆ. ಪ್ರತಿಮೆ ನಿರ್ಮಾಣ ಕಾರ್ಯ ಹಾಗೂ ಈ ಸಂಬಂಧ ಎಲ್ಲಾ ವಿಚಾರವನ್ನು ಈ ವಿಭಾಗವೇ ನೋಡಿಕೊಳ್ಳಲಿದೆ.

ನ್ಯೂಯಾರ್ಕ್ ಲಿಬರ್ಟಿ ಪ್ರತಿಮೆ 93 ಮೀ ಎತ್ತರವಿದೆ, ಮುಂಬೈನ ಶಿವಾಜಿ ಮಹಾರಾಜ್ ಪ್ರತಿಮೆ 212 ಮೀ, ಗುಜರಾತ್‍ನ ಸರ್ದಾರ್ ವಲ್ಲಭಾಬಾಯಿ ಪಟೇಲ್ ಪ್ರತಿಮೆ 183 ಮೀ, ಮುಂಬೈನ ಡಾ. ಅಂಬೇಡ್ಕರ್ ಪ್ರತಿಮೆ 137.2 ಮೀ, ಚೀನಾದ ಗೌತಮ ಬುದ್ಧ ಪ್ರತಿಮೆ 208 ಮೀ ಎತ್ತರವಿದೆ. ಆದರೆ ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ನಿರ್ಮಾಣವಾದರೆ ಅದು ವಿಶ್ವದ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Leave a Reply

Your email address will not be published. Required fields are marked *