Tuesday, 17th September 2019

Recent News

2019 ಲೋಕಸಮಯ: ದಿಗ್ವಿಜಯ್ ಸಿಂಗ್ ವಿರುದ್ಧ ಸಾಧ್ವಿ ಪ್ರಜ್ಞಾಸಿಂಗ್ ಸ್ಪರ್ಧೆ?

ಭೋಪಾಲ್: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಇಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಭೋಪಾಲ್ ನಿಂದ ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರಜ್ಞಾ ಸಿಂಗ್, ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದು, ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಪಡೆಯುವುದು ನಿಶ್ಚಿತ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ ನಾಯಕರಾದ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ರಾಮ್ ಲಾಲ್ ಅವರನ್ನು ಪ್ರಜ್ಞಾಸಿಂಗ್ ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು, ಸದ್ಯ ಭೋಪಾಲ್ ಬಿಜೆಪಿ ಅಭ್ಯರ್ಥಿಯಾಗಿರುವ ಅಲೋಕ್ ಸಂಜರ್ ಕೂಡ ಪ್ರಜ್ಞಾರ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದ ವಿರುದ್ಧ ಮಾತನಾಡುವ ದ್ರೋಹಿಗಳ ವಿರುದ್ಧ ಸ್ಪರ್ಧೆ ಮಾಡುವ ಇಚ್ಛೆ ಇದ್ದು, ಪಕ್ಷ ನನಗೆ ಟಿಕೆಟ್ ನೀಡುವ ವಿಶ್ವಾಸ ಇದೆ ಎಂದು ಪ್ರಜ್ಞಾ ಸಿಂಗ್ ತಿಳಿಸಿದ್ದಾರೆ.

1989 ರ ನಂತರ ಕಾಂಗ್ರೆಸ್ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದಿಲ್ಲ. ಕಳೆದ ಚುನಾವಣೆಯಲ್ಲೂ ಬಿಜೆಪಿಯ ಅಲೋಕ್ ಸಂಜರ್ 3.7 ಲಕ್ಷ ಮತಗಳಿಂದ ಗೆಲುವು ಪಡೆದಿದ್ದರು. 2008ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೆ ಒಳಗಾದ ಸ್ವಾಧ್ವಿ ಕಳೆದ ವರ್ಷ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ತಾನು ಕೃತ್ಯದಲ್ಲಿ ಭಾಗಿಯಾಗದೇ ಇದ್ದರೂ ನನ್ನ ಮೇಲೆ ಯುಪಿಎ ಸರ್ಕಾರ ಸುಳ್ಳು ಆರೋಪವನ್ನು ಹೊರಿಸಿತ್ತು ಎಂದು ಸಾಧ್ವಿ ಮಾಧ್ಯಮವೊಂದರ ಸಂದರ್ಶನದಲ್ಲಿ ತಿಳಿಸಿದ್ದರು.

ದಿಗ್ವಿಜಯ್ ಸಿಂಗ್ ಅವರನ್ನು ಬಿಜೆಪಿ ನಾಯಕರು ಹಿಂದೂ ವಿರೋಧಿ ನಾಯಕ ಎಂದೇ ಬಿಂಬಿಸುತ್ತಿದ್ದಾರೆ. ದಿಗ್ವಿಜಯ್ ಅವರು ಮಾಲೆಗಾಂವ್ ಸ್ಫೋಟದ ಬಳಿಕ ‘ಹಿಂದು ಉಗ್ರಗಾಮಿಗಳು’ ಎಂದು ಕರೆದು ಬಿಜೆಪಿ ಆರೋಪಿಗಳನ್ನು ಬೆಂಬಲಿಸುತ್ತಿದೆ ಎಂದು ಹೇಳಿಕೆ ನೀಡುತ್ತಿದ್ದರು. ಈಗ ದಿಗ್ವಿಜಯ್ ಅವರಿಗೆ ಕೌಂಟರ್ ಕೊಡಲೆಂದು ಬಿಜೆಪಿ ಭೋಪಾಲ್ ನಿಂದ ಸಾಧ್ವಿ ಅವರಿಗೆ ಟಿಕೆಟ್ ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *