Sunday, 15th September 2019

ಬೆಂ.ಗ್ರಾ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ತಡವಾಗಿದ್ದೇ ಸೋಲಿಗೆ ಕಾರಣ: ಅಶ್ವಥ್ ನಾರಾಯಣ್

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆ ತಡವಾಗಿದ್ದರಿಂದಲೇ ನಮಗೆ ಸೋಲಾಗಿದೆ ಎಂದು ಪರಾಜಿತ ಅಭ್ಯರ್ಥಿ ಅಶ್ವಥ್ ನಾರಾಯಣ್ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಶಾಸಕರು, ಲೋಕಸಭಾ ಚುನಾವಣೆಯ ಎರಡು ತಿಂಗಳ ಮುನ್ನವೇ ಆಯ್ಕೆ ಮಾಡಬೇಕಿತ್ತು. ಆದರೆ ಆಯ್ಕೆ ಪ್ರಕ್ರಿಯೆ ವಿಳಂಬವಾಗಿ, ಅಂತಿಮವಾಗಿ ನನ್ನ ಹೆಸರನ್ನು ಘೋಷಣೆ ಮಾಡಿದರು. ಒಂದು ವೇಳೆ ಹೆಚ್ಚಿನ ಕಾಲಾವಕಾಶ ಸಿಕ್ಕಿದ್ದರೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬಹುದಿತ್ತು ಎಂದು ವ್ಯಂಗ್ಯವಾಡಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದ್ದರೆ ನೂರಕ್ಕೆ ನೂರರಷ್ಟು ಜಯ ಸಾಧಿಸಿ, ಈಗ ಸಂಸದರಾಗಿರುತ್ತಿದ್ದರು. ಆದರೆ ಅದು ಅವರು ಮಾಡಿಕೊಂಡ ಎಡವಟ್ಟು. ನಾನು ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ, ಕೇಂದ್ರ ರಾಜಕಾರಣಕ್ಕೆ ಬರಲ್ಲ ಅಂತ ಮಾಚಿ ಸಚಿವರು ಹೇಳಿದ್ದೆ ಅಭ್ಯರ್ಥಿ ಆಯ್ಕೆಯ ವಿಳಂಬಕ್ಕೆ ಕಾರಣವಾಯಿತು ಎಂದು ತಿಳಿಸಿದರು.

ನನ್ನ ಹೆಸರು ಘೋಷಣೆಯಾದಾಗ ಪ್ರಚಾರಕ್ಕೆ ಸಮಯ ಕಡಿಮೆ ಇತ್ತು. ಹೀಗಾಗಿ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸಲು ಹಾಗೂ ಅವರ ಜೊತೆಗೆ ಬೆರೆತು ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ. ಆದರೆ ನಮ್ಮ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕತೆ, ಬದ್ಧತೆಯಿಂದ ಕೆಲಸ ಮಾಡಿದ್ದಕ್ಕೆ ಕ್ಷೇತ್ರದ ಮತದಾರರು ಈ ಬಾರಿ ಹೆಚ್ಚಿನ ಮತ ನೀಡಿದ್ದಾರೆ. ನಾವು ಸಾಂಕೇತಿಕವಾಗಿ ಅಂಕಿ-ಸಂಖ್ಯೆಗಳಲ್ಲಿ ಸೋತಿರಬಹುದು. ಈ ಸೋಲು ನಮಗೆ ಆತ್ಮಸ್ಥೈರ್ಯ ತುಂಬಿದೆ. ರಾಜ್ಯ ನಾಯಕರಿಗೆ ಅಭ್ಯರ್ಥಿಯನ್ನು ಮುಂಚಿತವಾಗಿ ಆಯ್ಕೆ ಮಾಡಬೇಕಿತ್ತು ಎಂಬ ತಪ್ಪು ಕೂಡ ಮನವರಿಕೆಯಾಗಿದೆ ಎಂದು ಹೇಳಿದರು.

ಈ ಬಾರಿಯ ಚುನಾವವಣೆಯಲ್ಲಿ ಡಿಕೆ ಸುರೇಶ್ 2,07,229 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಡಿಕೆ ಸುರೇಶ್ 8,77,712 ಮತಗಳನ್ನು ಪಡೆದರೆ ಅಶ್ವಥ್ ನಾರಾಯಣ್ 6,70,483 ಮತಗಳನ್ನು ಪಡೆದಿದ್ದಾರೆ.

2014ರ ಚುನಾವಣೆಯಲ್ಲಿ ಡಿಕೆ ಸುರೇಶ್ 2,31,480 ಮತಗಳ ಅಂತರದಿಂದ ಗೆದ್ದಿದ್ದರು. ಸುರೇಶ್ ಅವರಿಗೆ 6,52,723 ಮತಗಳು ಬಿದ್ದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಮುನಿರಾಜುಗೌಡ 4,21,243 ಮತಗಳನ್ನು ಪಡೆದಿದ್ದರೆ ಜೆಡಿಎಸ್‍ನಿಂದ ಕಣಕ್ಕೆ ಇಳಿದಿದ್ದ ಪ್ರಭಾಕರ ರೆಡ್ಡಿ 3,17,870 ಮತಗಳನ್ನು ಪಡೆದಿದ್ದರು

Leave a Reply

Your email address will not be published. Required fields are marked *