Sunday, 21st July 2019

ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಮುಖಂಡರು ಗೈರು!

ಬೆಂಗಳೂರು: ಬಿಜೆಪಿಯ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಸುವ ವೇಳೆ ಪಕ್ಷದ ಮುಖಂಡರು, ಶಾಸಕರು ಗೈರಾಗಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿ ಸೂರ್ಯ ಸ್ಪರ್ಧಿಸುತ್ತಿದ್ದು, ಇಂದು ಮಧ್ಯಾಹ್ನ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ತೇಜಸ್ವಿ ಸೂರ್ಯ ಗಿರಿನಗರದ ಗಣೇಶ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕ ರವಿಸುಬ್ರಮಣ್ಯ ಅವರು ಮಾತ್ರ ಭಾಗಿಯಾಗಿದ್ದರು.

ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಿಂದ ನಾಮಪತ್ರ ಸಲ್ಲಿಕೆ ಕೇಂದ್ರದವರೆಗೂ ತೆರೆದ ಚೀಪ್ ನಲ್ಲಿ ತೇಜಸ್ವಿ ಸೂರ್ಯ ಮೆರವಣಿಗೆ ನಡೆಸಿದರು. ಈ ವೇಳೆ ತೇಜಸ್ವಿ ಸೂರ್ಯ ಅವರಿಗೆ ಎನ್.ಆರ್.ರಮೇಶ್, ವೆಂಕಟೇಶ್, ಕಾರ್ಯಕರ್ತರು ಮಾತ್ರ ಸಾಥ್ ನೀಡಿದರು.

ಸಾಧಾರಣವಾಗಿ ಲೋಕಸಭಾ ಕ್ಷೇತ್ರ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಾಸಕರು, ನಾಯಕರು ಭಾಗಿಯಾಗಿ ಬೆಂಬಲ ನೀಡುವುದು ಸಹಜ. ಆದರೆ ತೇಜಸ್ವಿ ಸೂರ್ಯ ಅವರ ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿಯ ಶಾಸಕರಾದ ಸೋಮಣ್ಣ, ಸತೀಶ್ ರೆಡ್ಡಿ ಹಾಗೂ ಆರ್.ಅಶೋಕ್ ಗೈರಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಅನಂತ್‍ಕುಮಾರ್ ಅವರು ನಾಮಪತ್ರ ಸಲ್ಲಿಸುವಾಗ ಮಾಜಿ ಡಿಸಿಎಂ ಆರ್.ಅಶೋಕ್ ಹಾಜರಿರುತ್ತಿದ್ದರು. ಅನಂತ್‍ಕುಮಾರ್ ಅವರ ನಿಧನದಿಂದ ಈ ಬಾರಿ ಟಿಕೆಟ್ ಅನ್ನು ಪತ್ನಿ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ನೀಡುತ್ತಾರೆ ಎಂಬ ನಿರೀಕ್ಷೆಯನ್ನು ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಹೊಂದಿದ್ದರು. ಕೊನೆಯ ಕ್ಷಣದಲ್ಲಿ ಹೈಕಮಾಂಡ್ ತೇಜಸ್ವಿನಿ ಸೂರ್ಯ ಅವರ ಹೆಸರನ್ನು ಘೋಷಿಸಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ನಾಯಕರು ಗೈರಾಗಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.

Leave a Reply

Your email address will not be published. Required fields are marked *