Saturday, 7th December 2019

ಬೆಂಗಳೂರು ಉತ್ತರದಲ್ಲಿ ಜೆಡಿಎಸ್‍ಗೆ ಸಂಕಷ್ಟ – ಷರತ್ತು ಒಪ್ಪಿದ್ರೆ ಸ್ಪರ್ಧೆಗೆ ಸಿದ್ಧ ಎಂದ ಶಂಕರ್!

ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಇಲ್ಲದೆ ಜೆಡಿಎಸ್ ಪರದಾಡುವಂತಾಗಿದ್ದು, ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

ಮಾಜಿ ಶಿಷ್ಯ, ಕಾಂಗ್ರೆಸ್‍ನ ಬಿ.ಎಲ್.ಶಂಕರ್ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ಲಾನ್ ರೂಪಿಸಿದ್ದರು. ಬಿ.ಎಲ್.ಶಂಕರ್ ಅವರು ಸ್ಪರ್ಧೆಗೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಜೆಡಿಎಸ್ ಚಿಹ್ನೆ ಅಡಿ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.

ನಾನು ಚುನಾವಣೆಗೆ ಸ್ಪರ್ಧಿಸಲು ಸಿದ್ಧ. ಆದರೆ ಜೆಡಿಎಸ್ ಚಿಹ್ನೆಯ ಅಡಿ ಸ್ಪರ್ಧಿಸುವುದಿಲ್ಲ. ಸ್ಪರ್ಧೆ ಮಾಡಿದರೆ ನಾನು ಕಾಂಗ್ರೆಸ್ ಚಿಹ್ನೆಯ ಅಡಿಯಲ್ಲಿ ಕಣಕ್ಕೆ ಇಳಿಯುತ್ತೇನೆ ಎಂದು ದೋಸ್ತಿ ನಾಯಕರಿಗೆ ಶಂಕರ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಶಂಕರ್ ಜೆಡಿಎಸ್ ಅಡಿಯಿಂದ ಸ್ಪರ್ಧೆ ಮಾಡದ ಹಿನ್ನೆಲೆಯಲ್ಲಿ ದೇವೇಗೌಡರನ್ನು ಕಣಕ್ಕೆ ಇಳಿಸಿದರೆ ಹೇಗೆ ಎನ್ನುವ ಚರ್ಚೆಯನ್ನು ದಳ ನಾಯಕರು ಮಾಡಿದ್ದಾರೆ. ಆದರೆ ದೇವೇಗೌಡರು ಎರಡು ಕಡೆಯಿಂದ ನಿಲ್ಲುವ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ. ಹೀಗಾಗಿ ಕೊನೆ ಕ್ಷಣದಲ್ಲಿ ಜೆಡಿಎಸ್ ಕ್ಷೇತ್ರವನ್ನು ಬಿಟ್ಟು ಕೊಡುವ ಸಾಧ್ಯತೆ ಇದೆ ಎಂದು ಮೈತ್ರಿ ಪಕ್ಷಗಳ ಮೂಲಗಳು ತಿಳಿಸಿವೆ.

ಈಗಾಗಲೇ ನಮ್ಮ ವಿರುದ್ಧ ಕುಟುಂಬ ರಾಜಕೀಯದ ಆರೋಪವಿದೆ. ನಾನು ಎರಡು ಕ್ಷೇತ್ರದಿಂದ ಸ್ಪರ್ಧಿಸಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಅಷ್ಟೇ ಅಲ್ಲದೇ ತುಮಕೂರಿನಲ್ಲಿ ಹಿನ್ನಡೆ ಆಗಬಹುದು. ಇತ್ತ ಬೆಂಗಳೂರಿನ ಕಾಂಗ್ರೆಸ್ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಿಷ್ಯರಾಗಿದ್ದಾರೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದು ಕಷ್ಟವಾಗುತ್ತದೆ ಎಂದು ಎಚ್.ಡಿ.ದೇವೇಗೌಡ ಅವರು ತಮ್ಮ ಅಭಿಪ್ರಾಯವನ್ನು ಇತರ ನಾಯಕರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವನ್ನು ಕೈಬಿಟ್ಟರೆ ಮುದ್ದಹನುಮೇಗೌಡರ ವಿರುದ್ಧ ಸ್ಪರ್ಧಿಸಲು ಆಗದೇ ಹೆದರಿದರು ಎಂಬ ಸಂದೇಶ ಹೋಗತ್ತದೆ. ಹೀಗಾಗಿ ಜೆಡಿಎಸ್ ಚಿಹ್ನೆಯ ಅಡಿಯಲ್ಲೇ ಬಿ.ಎಸ್.ಶಂಕರ್ ಕಣಕ್ಕೆ ಇಳಿಸುವಂತೆ ಕಾಂಗ್ರೆಸ್ ನಾಯಕರ ಮನವೊಲಿಕೆ ಕಸರತ್ತು ನಡೆಯುತ್ತಿದೆ.

ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಹಾಗೂ ತುಮಕೂರು ಕ್ಷೇತ್ರದಿಂದ ಎಚ್.ಡಿ.ದೇವೇಗೌಡ ಅವರು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ. ಇದಾದ ಬಳಿಕ ಸಂಜೆ ಚರ್ಚೆ ನಡೆಸಿ ಬೆಂಗಳೂರು ಉತ್ತರ ಕ್ಷೇತ್ರದ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲು ದೋಸ್ತಿ ಪಕ್ಷಗಳ ನಾಯಕರು ಮುಂದಾಗಿದ್ದಾರೆ ಎನ್ನುವ ವಿಚಾರ ಈಗ ಸಿಕ್ಕಿದೆ.

ಜೆಡಿಎಸ್‍ಗೆ ಭಯ ಯಾಕೆ?
ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ, ಕೇಂದ್ರ ಸಚಿವ ಸದಾನಂದ ಗೌಡ ಅವರು ಈ ಬಾರಿಯೂ ಈ ಕ್ಷೇತ್ರದಿಂದಲೇ ಕಣಕ್ಕೆ ಇಳಿಯಲಿದ್ದಾರೆ. ಕಳೆದ ಚುನಾವಣೆಯಲ್ಲಿ ಡಿವಿಎಸ್ 2.29 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ಡಿವಿಎಸ್ 7,18,326 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಸಿ.ನಾರಾಯಣ ಸ್ವಾಮಿ 4,88,562 ಮತಗಳನ್ನು ಪಡೆದಿದ್ದರು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅಬ್ದುಲ್ ನಜೀಂ ಕೇವಲ 92,681 ಮತಗಳನ್ನು ಪಡೆದಿದ್ದರು. 1996ರ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ನಾರಾಯಣ ಸ್ವಾಮಿ ಗೆಲುವು ಪಡೆದಿದಿದ್ದರು. ನಂತರ ನಡೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಜಾಫರ್ ಷರೀಫ್ ಆಯ್ಕೆ ಆಗಿದ್ದರು. 2004, 2009, 2014ರವರೆಗೆ ನಡೆದ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಬಿಜೆಪಿ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿತ್ತು.

Leave a Reply

Your email address will not be published. Required fields are marked *