Wednesday, 19th February 2020

Recent News

ವಿಧಿಯಾಟದಂತೆ ಕೃಷ್ಣಭೈರೇಗೌಡ ಸ್ಪರ್ಧೆ ಮಾಡಬೇಕಾಯ್ತು: ಜಿ.ಪರಮೇಶ್ವರ್

– ಪ್ರಧಾನಿ ಮೋದಿ ಮುಸ್ಲಿಮರಿಗೆ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ
– ಈ ಲೋಕಸಭೆ ಚುನಾವಣೆಗೆ ಮಾತ್ರ ಮೈತ್ರಿ: ಜವರಾಯೇಗೌಡ

ಬೆಂಗಳೂರು: ಸಚಿವ ಕೃಷ್ಣಭೈರೇಗೌಡ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಡುವ ಆಸೆ ಇರಲಿಲ್ಲ. ವಿಧಿಯಾಟದಂತೆ ಅವರು ಸ್ಪರ್ಧೆ ಮಾಡಬೇಕಾಯಿತು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

ನಗರದ ಹೇರೋಹಳ್ಳಿಯಲ್ಲಿ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಪರ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡ ಸ್ಪರ್ಧೆ ಮಾಡಬೇಕು ಅಂತ ಎಲ್ಲರೂ ಬಯಸಿದ್ದರು. ಆದರೆ ಅವರು ತುಮಕೂರಿಗೆ ಹೋಗಲು ಮನಸ್ಸು ಮಾಡಿದರು. ನಾನು ಮತ್ತು ಸಂಸದ ಮುದ್ದಹನುಮೇಗೌಡ ನೀವು ತುಮಕೂರಿನಲ್ಲಿ ಸ್ಪರ್ಧೆ ಮಾಡಿ. ಇಲ್ಲ ಅಂದ್ರೆ ನಮಗೆ ಬಿಟ್ಟುಕೊಡಿ ಅಂತ ಕೇಳಿದ್ದೇವು. ಇದರಿಂದಾಗಿ ಎಚ್.ಡಿ.ದೇವೇಗೌಡರು ತುಮಕೂರು ಆಯ್ಕೆ ಮಾಡಿಕೊಂಡು ಬೆಂಗಳೂರು ನಮಗೆ ಬಿಟ್ಟುಕೊಟ್ಟರು. ನಾವೇ ಅವರನ್ನ ತುಮಕೂರಿಗೆ ಕರೆದುಕೊಂಡು ಹೋದೆವು ಎಂದು ತಿಳಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಅನೇಕ ಅಭಿವೃದ್ಧಿ ಕೆಲಸ ಮಾಡಿತ್ತು. ಆದರೆ ಚುನಾವಣೆಯಲ್ಲಿ ನಮ್ಮ ಕೆಲಸ ಜನರಿಗೆ ತಲುಪಿಲ್ಲ. ಹೀಗಾಗಿ ಮತದಾರರು ಯಾವ ಪಕ್ಷಕ್ಕೂ ಬಹುಮತ ಜನ ನೀಡಿಲ್ಲ. ಬಿಜೆಪಿಗೆ ಅಧಿಕಾರ ಕೊಡಬಾರದು ಅಂತ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ವಿ. ಜೆಡಿಎಸ್-ಕಾಂಗ್ರೆಸ್ ಸಿದ್ಧಾಂತ, ಬದ್ಧತೆಯಲ್ಲಿ ಒಂದೇ ಆಗಿವೆ. ಹೀಗಾಗಿ ನಾವು ಒಂದಾಗಿದ್ದೇವೆ. ನಾವು ಒಟ್ಟಿಗೆ ಹೋಗುವುದನ್ನು ಕಂಡು ಅನೇಕರು ಟೀಕೆ ಮಾಡಿದರು ಎಂದು ಬಿಜೆಪಿ ವಿರುದ್ಧ ಗುಡುಗಿದರು.

ದೇಶದ ಪರಿಸ್ಥಿತಿ ಹೇಗಿದೆ ಅಂತ ಜನರಿಗೆ ಗೊತ್ತಿದೆ. ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಭರವಸೆ ಕೊಟ್ಟಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇನೆ ಅಂತ ಪ್ರಧಾನಿ ಮೋದಿ ಹೇಳಿದ್ದರು. ಕೋಟ್ಯಂತರ ಯುವಕರು ಮೋದಿ ಅವರನ್ನು ನಂಬಿ ಮತ ಹಾಕಿದರು. ದೇಶದ ಜನರ ಮುಂದೆ ಮೋದಿ ಅವರ ರಿಪೋರ್ಟ್ ಕಾರ್ಡ್ ಇದೆ. ಈ ಬಾರಿ ಮತದಾರರು ಸೂಕ್ತ ಉತ್ತರ ನೀಡುತ್ತಾರೆ ಎಂದು ತಿಳಿಸಿದರು.

ರೈತರ ಸಾಲಮನ್ನಾ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಕೇಳಿಕೊಂಡಿದ್ದೇವು. ಆದರೆ ಅವರು ಒಪ್ಪಲಿಲ್ಲ. ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ಈಗಾಗಲೇ 11 ಲಕ್ಷ ರೈತರಿಗೆ ಋಣಮುಕ್ತ ಪತ್ರ ನಾವು ನೀಡಿದ್ದೇವೆ. ನೀವು ಯಾಕೆ ಸಾಲಮನ್ನಾ ಮಾಡಿಲ್ಲ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದರು.

ಪ್ರಧಾನಿ ಮೋದಿ ಅವರು ಜಿಎಸ್‍ಟಿ ಮೂಲಕ ಮಜ್ಜಿಗೆಗೂ ಟ್ಯಾಕ್ಸ್ ಹಾಕಿದ್ದಾರೆ. ಅನೇಕ ಬಾರಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಕಡಿಮೆ ಆಗಿದ್ದರೂ ದೇಶದಲ್ಲಿ ಮಾತ್ರ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿದೆ. ಇದರಿಂದ ಸಿಕ್ಕ ಉಳಿತಾಯದ ಹಣ ಎಲ್ಲಿ ಹೋಯಿತು ಅಂತ ಪ್ರಧಾನಿ ಮೋದಿ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಾರೆ. ಅವರೇ ರಫೇಲ್‍ನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಹೀಗಾಗಿ ಅವರಿಗೆ ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ ಇಲ್ಲ. ಅವರು ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಮುಸ್ಲಿಮರನ್ನು ಕೊಲೆ ಮಾಡಿದರು. ಪ್ರಧಾನಿಯಾದ ಮೇಲೆ ಮುಸ್ಲಿಮರ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರು ಸಂವಿಧಾನ ಬದಲಾವಣೆ ಮಾಡಬೇಕು ಅಂತ ಹೇಳುತ್ತಾರೆ. ಇದರ ಬಗ್ಗೆ ಬಿಜೆಪಿಯವರು ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿಯವರು ದೇಶವನ್ನು ಶಾಂತಿಯುತವಾಗಿರಲು ಬಿಡುವುದಿಲ್ಲ ಎಂದು ದೂರಿದರು.

ಈಗ ಮತ ಹಾಕಿದರೆ ಮುಂದೆ ಹೇಗೆ ಎನ್ನುವ ಭಯ ಬೇಡ. ಈ ಲೋಕಸಭೆ ಚುನಾವಣೆಗೆ ಮಾತ್ರ ಜೆಡಿಎಸ್ ಜೊತಗೆ ಮೈತ್ರಿ ಮಾಡಿಕೊಂಡಿದ್ದೇವೆ. ಹೀಗಾಗಿ ಆತಂಕ ಇಲ್ಲದೆ ಮೈತ್ರಿ ಅಭ್ಯರ್ಥಿ ಕೃಷ್ಣಬೈರೇಗೌಡ ಅವರಿಗೆ ಮತ ಹಾಕಿ. ಕಾರ್ಪೋರೇಷನ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹೇಗೆ ಎನ್ನುವ ಅನುಮಾನ ಬೇಡ ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಜವರಾಯೇಗೌಡ ಹೇಳಿದರು.

Leave a Reply

Your email address will not be published. Required fields are marked *