Connect with us

Crime

ಲಾಕ್‍ಡೌನ್ ಎಫೆಕ್ಟ್- ಸಿಗರೇಟ್ ಕೊಡದಿದ್ದಕ್ಕೆ ಬರ್ಬರವಾಗಿ ಕೊಲೆಗೈದ್ರು

Published

on

– ಹೊಟ್ಟೆ, ಎದೆಗೆ ಸ್ಕ್ರೂಡ್ರೈವರ್‌ನಿಂದ ಇರಿದ ಪಾಪಿಗಳು
– ಸಿಗರೇಟ್ ಕೊರತೆಯೇ ಕೊಲೆಗೆ ಕಾರಣವಾಯಿತಾ?

ಮುಂಬೈ: ಸಿಗರೇಟ್ ನೀಡಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯನ್ನು ಇಬ್ಬರು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್‍ನಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಅರವಿಂದ್ ಶಂಕರ್ ಕುಮಾರ್ (38) ಕೊಲೆಯಾದ ವ್ಯಕ್ತಿ. ಕಲ್ಯಾಣ್‍ನ ಎಪಿಎಂಸಿ ಮಾರುಕಟ್ಟೆ ಬಳಿ ಬುಧವಾರ ಕೊಲೆಗೈದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧಕಾರ್ಯ ಅಪ್ರಾರಂಭಿಸಿದ್ದಾರೆ.

ಆಗಿದ್ದೇನು?:
ಮೃತ ತರಕಾರಿ ವ್ಯಾಪಾರಿ ಅರವಿಂದ್ ತನ್ನ ಸೋದರಸಂಬಂಧಿ ಆನಂದ್ ಗುಪ್ತಾ ಜೊತೆಗೆ ಕಲ್ಯಾಣ್‍ನ ಗೋವಿಂದ್ ವಾಡಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅರವಿಂದ್ ಎಂದಿನಂತೆ ಬುಧವಾರ ತರಕಾರಿ ಮಾರಾಟಕ್ಕೆ ಹೋಗಿದ್ದರು. ಬಳಿಕ ಎಪಿಎಂಸಿ ಮಾರುಕಟ್ಟೆಯಲ್ಲಿನ ಶೌಚಾಲಯದ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದರು. ಈ ವೇಳೆ ಇಬ್ಬರು ದುಷ್ಕರ್ಮಿಗಳು ಅಲ್ಲಿಗೆ ಬಂದು ಸಿಗರೇಟ್ ಕೊಡುವಂತೆ ವಿನಂತಿಸಿಕೊಂಡಿದ್ದರು. ಆದರೆ ಅರವಿಂದ್ ಸಿಗರೇಟ್ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಕೋಪಗೊಂಡ ದುಷ್ಕರ್ಮಿಗಳು ಜಗಳ ಆರಂಭಿಸಿದ್ದರು. ಅಷ್ಟಕ್ಕೆ ಬಿಡದೇ ಸ್ಕ್ರೂಡ್ರೈವರ್‌ನಿಂದ ಅರವಿಂದ್ ಹೊಟ್ಟೆ ಮತ್ತು ಎದೆಗೆ ಅನೇಕ ಬಾರಿ ಇರಿದು ಪರಾರಿಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆನಂದ್ ಗುಪ್ತಾ, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅರವಿಂದ್ ಅವರನ್ನು ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಕಿಂಗ್ ಎಡ್ವರ್ಡ್ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರವಿಂಗ್ ಸಾವನ್ನಪಿದ್ದಾರೆ ಎಂದು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಲ್ಯಾಣ್‍ದ ಬಜಾರ್‍ಪೇಟೆ ಪೊಲೀಸರು, ಆರೋಪಿಗಳು ಅರವಿಂದ್ ಅವರ ಮೇಲೆ ಹಲ್ಲೆ ನಡೆಸಲು ಸ್ಕ್ರೂಡ್ರೈವರ್ ಬಳಸಿದ್ದಾರೆ. ಇಬ್ಬರು ದುಷ್ಕರ್ಮಿಗಳ ವಿರುದ್ಧ ಐಪಿಸಿ ಸೆಕ್ಷನ್ 34 (ಸಾಮಾನ್ಯ ಉದ್ದೇಶ) ಮತ್ತು 326 (ಸ್ವಯಂಪ್ರೇರಣೆಯಿಂದ ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ತೀವ್ರ ನೋವನ್ನುಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗೆ ಶೋಧಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್‍ನಿಂದಾಗಿ ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾಗಿದೆ. ಈ ಹಿನ್ನೆಲೆ ಪಾನ್ ಅಂಗಡಿಗಳು ಹಾಗೂ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ಸಿಗರೇಟ್ ಕೊರತೆ ಉಂಟಾಗಿ ಸಿಗರೇಟ್ ಸಿಗದೆ ಇರುವುದಕ್ಕೆ ಆರೋಪಿಗಳು ಕೃತ್ಯ ಎಸೆಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.