Connect with us

Chitradurga

ಚಿತ್ರದುರ್ಗದಿಂದ ಉತ್ತರ ಕರ್ನಾಟಕಕ್ಕೆ ತೆರಳಲು ಬಸ್ ಇಲ್ಲದೆ ಪ್ರಯಾಣಿಕರ ಪರದಾಟ

Published

on

– ಸಾಮಾಜಿಕ ಅಂತರ ಮರೆತ ಪ್ರಯಾಣಿಕರು

ಚಿತ್ರದುರ್ಗ: ಕೆಎಸ್‍ಆರ್ ಟಿಸಿ ಬಸ್ ಸಂಚಾರ ಆರಂಭಿಸಿದ ಮೂರನೇ ದಿನವೂ ಸಮಸ್ಯೆಯಾಗುತ್ತಿದ್ದು, ಕೆಲವೆಡೆ ಪ್ರಯಾಣಿಕರಿಲ್ಲದೆ ಬಸ್‍ಗಳು ನಿಂತಲ್ಲೇ ನಿಂತಿದ್ದರೆ, ಇನ್ನೂ ಹಲವೆಡೆ ತಮ್ಮ ಊರಿಗೆ ತೆರಳಲು ಬಸ್‍ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.

ಪ್ರತಿ ದಿನ ಪ್ರಯಾಣಿಕರು ವಿವಿಧೆಡೆಗೆ ತೆರಳಲು ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಮುಗಿಬೀಳುತ್ತಿದ್ದಾರೆ. ಗುರುವಾರ ಬೆಳಗ್ಗೆ ಸಹ ರಸ್ತೆಯುದ್ದಕ್ಕೂ ಜನ ಸಾಲುಗಟ್ಟಿ ನಿಂತಿದ್ದರು. ಮಕ್ಕಳು, ಮಹಿಳೆಯರು ಸೇರಿದಂತೆ ಪ್ರಯಾಣಿಕರೆಲ್ಲರೂ ಥಮರ್ಲ್ ಟೆಸ್ಟಿಂಗ್‍ಗಾಗಿ ಬಸ್ ನಿಲ್ದಾಣದ ಮುಂಭಾಗ ಸಾಲುಗಟ್ಟಿ ನಿಂತಿದ್ದರು. ಊರಿಗೆ ತೆರಳಲು ತಪಾಸಣೆಗಾಗಿ ಸರತಿಯಲ್ಲಿ ನಿಲ್ಲುವ ಭರಾಟೆಯಲ್ಲಿ ಸಾಮಾಜಿಕ ಅಂತರ ಮರೆತು, ಗುಂಪಾಗಿ ನಿಲ್ಲುತ್ತಿದ್ದಾರೆ.

ಪ್ರಯಾಣಿಕರೆಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಹಾಗೂ ವಿಳಾಸ ದಾಖಲಿಸುವುದು ಕಡ್ಡಾಯವಾಗಿದ್ದರಿಂದ ಮತ್ತಷ್ಟು ವಿಳಂಬವಾಗುತ್ತಿದೆ. ಬೆಂಗಳೂರಿಗೆ ತೆರಳುವವರ ಸಂಖ್ಯೆಯೇ ಹೆಚ್ಚಾಗಿದ್ದು, ಶಿವಮೊಗ್ಗ, ದಾವಣಗೆರೆ, ಹೊಸಪೇಟೆಗೆ ಹೋಗುವವರ ಸಂಖ್ಯೆಯೂ ಸಾಕಷ್ಟು ಪ್ರಮಾಣದಲ್ಲಿದೆ. ಯಾವ ಕಡೆಗೆ ಹೆಚ್ಚು ಪ್ರಯಾಣಿಕರಿದ್ದಾರೋ, ಎಲ್ಲಿಗೆ ಬಸ್ ಬೇಡಿಕೆ ಹೆಚ್ಚಿದೆಯೋ ಅಲ್ಲಿಗೆ ಮಾತ್ರ ಬಸ್ ಬಿಡಲಾಗುತ್ತಿದೆ. ಹೀಗಾಗಿ ಕೆಲ ಪ್ರಯಾಣಿಕರು, ಉತ್ತರ ಕರ್ನಾಟಕದ ದೂರದ ಊರುಗಳಿಗೆ ತೆರಳಲು ಬಸ್‍ಗಳೇ ಇಲ್ಲ ಎಂಬಂದಾಗಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ.