ಸಾಲಮನ್ನಾ ಹವಾ ಕ್ರಿಯೇಟ್ ಮಾಡಲು ಜೆಡಿಎಸ್‍ನಿಂದ ಅದ್ಧೂರಿ ಪಾದಯಾತ್ರೆ

ಬೆಂಗಳೂರು: ‘ಸೋಲು ಗೆಲುವು ಬೇಕಾಗಿಲ್ಲ. ಆದರೆ ಹವಾ ಕ್ರಿಯೇಟ್ ಮಾಡ್ಬೇಕು. ಸಾಲಮನ್ನಾ ಕುರಿತು ಜನರಿಗೆ ಸರ್ಕಾರದ ಸಾಧನೆ ತಿಳಿಸಬೇಕು ಎಂದು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‍ವಿ ದತ್ತಾ ಹೇಳಿದ್ದಾರೆ.

ಖಾಸಗಿ ಹೋಟೆಲ್‍ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅನ್ನ ಭಾಗ್ಯದಿಂದ ರಾಜಕೀಯವಾಗಿ ಲಾಭವಾಯ್ತು. ಆದರೆ, ಸಾಲ ಮನ್ನಾದಿಂದ ರಾಜಕೀಯ ಲಾಭವಾಗಿಲ್ಲ. ಪ್ರಧಾನಿ ಮೋದಿ ವರ್ಷಕ್ಕೆ ಆರು ಸಾವಿರ ನೀಡಿದರೆ ಅವರಿಗೆ ಲಾಭ ಸಿಗುತ್ತದೆ. 46 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದರೂ ನಮಗೇನೂ ಲಾಭವಾಗಿಲ್ಲ. ಸೋಲು ಗೆಲುವು ಬೇಕಾಗಿಲ್ಲ. ಆದರೆ ಹವಾ ಕ್ರಿಯೇಟ್ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮೊದಲ ಹಂತದಲ್ಲಿ ಕಾವೇರಿಯಿಂದ ತುಂಗಭದ್ರೆಯವರೆಗೆ ಪಾದಯಾತ್ರೆ ನಡೆಯಲಿದೆ. ಎರಡನೇ ಹಂತದ ಪಾದಯಾತ್ರೆ ಕೃಷ್ಣಾದಿಂದ ಮಲಪ್ರಭಾವರೆಗೆ ನಂಜನಗೂಡು, ಮಳವಳ್ಳಿ, ಕೊಳ್ಳೇಗಾಲ, ಬೆಂಗಳೂರು, ಹೊಸಕೋಟೆ, ಚಿಂತಾವಣಿ, ಕುಣಿಗಲ್, ತುಮಕೂರು, ನೆಲಮಂಗಲ, ಮಡಿಕೇರಿ, ಸುಳ್ಯ, ಮಂಗಳೂರು, ಹಾಸನ, ಬೇಲೂರು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹರಿಹರದವರೆಗೆ ಸುಮಾರು 1,475 ಕಿ.ಮೀ. ಪಾದಯಾತ್ರೆ ಮಾಡಬೇಕು. ಪಾದಯಾತ್ರೆ ಪ್ರಾರಂಭಿಸಿದ್ದೇ ದೇವೇಗೌಡರು. ನಮಗೀಗ ಪ್ರಾದೇಶಿಕ ವಿಷಯಗಳೇ ಹೋರಾಟದ ಅಸ್ತ್ರ. ಇದರಲ್ಲಿ ಕಾವೇರಿ, ಮಹದಾಯಿ, ಬೆಳಗಾವಿ, ರೈಲ್ವೇ ಅನುದಾನಗಳು ಎಲ್ಲಾ ಸೇರುತ್ತವೆ ಎಂದು ಪಾದಯಾತ್ರೆಯ ರೂಪುರೇಷೆಗಳನ್ನು ತಿಳಿಸಿದರು.

ಆಗಸ್ಟ್ 20ರಿಂದ ಪಾದಯಾತ್ರೆ
ಮೊದಲ ಹಂತದ ಪಾದಯಾತ್ರೆ ಕಾವೇರಿಯಿಂದ ತುಂಗಭದ್ರಾದವರೆಗೆ ನಡೆಯಲಿದ್ದು, ಆಗಸ್ಟ್ 20ರಂದು ಪಾದಯಾತ್ರೆ ಆರಂಭ ಆಗಲಿದೆ. ದಿ.ದೇವರಾಜು ಅರಸು ಅವರ ಹುಟ್ಟು ಹಬ್ಬ. ಹೀಗಾಗಿ ಅಂದು ನಮ್ಮ ಪಾದಯಾತ್ರೆ ಪ್ರಾರಂಭ ಮಾಡುತ್ತೇವೆ. ಆಗಸ್ಟ್ 20ರಿಂದ ನವೆಂಬರ್‍ವರೆಗೆ ಪಾದಯಾತ್ರೆ ನಡೆಯಲಿದೆ. ಎರಡನೇ ಹಂತದ ಪಾದಯಾತ್ರೆ ಡಿಸೆಂಬರ್‍ನಿಂದ 2020ರ ಫೆಬ್ರವರಿ ವರೆಗೆ ನಡೆಯಲಿದ್ದು, ತುಂಗಭದ್ರಾದಿಂದ-ಕೃಷ್ಣ-ಮಲಪ್ರಭಾ ವರೆಗೆ ನಡೆಯಲಿದೆ ಎಂದು ವೈಎಸ್ ವಿ ದತ್ತ ಮಾಹಿತಿ ನೀಡಿದರು.

‘ಕೈ’ ನಿಂದ ಕೊಲೆ ಬೆದರಿಕೆ :
ಜೆಡಿಎಸ್ ವರಿಷ್ಠರ ಬಳಿ ಅಳಲು ತೋಡಿಕೊಂಡ ಯುವ ಜೆಡಿಎಸ್ ಕಾರ್ಯಕರ್ತರು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರೆ ನಮಗೆ ಕಾಂಗ್ರೆಸ್ಸಿನವರು ಕೊಲೆ ಬೆದರಿಕೆ ಹಾಕುತ್ತಾರೆ. ಈ ಬಗ್ಗೆ ಸ್ಥಳೀಯ ಶಾಸಕರ ಗಮನಕ್ಕೆ ತಂದರೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಸಮಸ್ಯೆಗಳನ್ನು ನಮ್ಮ ಪಕ್ಷದವರೇ ಆಲಿಸಿಲ್ಲ ಅಂದರೆ ನಾವು ಎಲ್ಲಿಗೆ ಹೋಗಬೇಕು ಎಂದು ನಾಗಮಂಗಲ ತಾಲೂಕಿನ ಯುವ ಕಾರ್ಯಕರ್ತ ಜಯಶಂಕರ್ ಅಳಲು ತೋಡಿಕೊಂಡರು.

ನಿಖಿಲ್ ಕುಮಾರಸ್ವಾಮಿ ಪಾದ ಯಾತ್ರೆ ಮಾಡಿದ್ರೆ 2 ಲಕ್ಷ ಕಾರ್ಯಕರ್ತರನ್ನು ಸೇರಿಸುತ್ತೇವೆ. ಸುಮ್ಮನೆ ಪಾದಯಾತ್ರೆ ಮಾಡುವುದಾದರೆ ಪ್ರಯೋಜನವಿಲ್ಲ. ಪಾದಯಾತ್ರೆಗೆ ಕೇಂದ್ರ ಸರ್ಕಾರ ವಿರುದ್ಧ ಹೋರಾಟ ಎಂಬ ಅಜೆಂಡಾ ಬೇಕು. ರಾಜ್ಯದ ವಿಷಯಗಳ ಬಗ್ಗೆ ಕೇಂದ್ರ ಬಗೆಹರಿಸದ ವಿಷಯಗಳನ್ನು ಅಜೆಂಡಾವಾಗಿ ಮಾಡಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಎಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ವರಿಷ್ಠರ ದೇವೇಗೌಡರಿಗೆ ಸಲಹೆ ನೀಡಿದ್ದಾರೆ.

ಆಕ್ಟೀವ್ ಇಲ್ಲ
ನಾಗಮಂಗಲದಲ್ಲಿ ಇವತ್ತು ಕೂಡ ಕಾಂಗ್ರೆಸ್ಸಿನ ಚಲುವರಾಯ ಸ್ವಾಮಿಯದ್ದೇ ನಡೆಯುತ್ತಿದೆ. ನಮ್ಮ ಪಕ್ಷದ ಶಾಸಕ ಸುರೇಶ್ ಗೌಡರದ್ದು ಏನು ನಡೆಯುತ್ತಿಲ್ಲ. ಯಾವುದಾದರೂ ಕೆಲಸ ಆಗಬೇಕಿದ್ದರೂ ಚಲುವರಾಯಸ್ವಾಮಿ ಹೇಳಿದರೆ ಮಾತ್ರ ಕ್ಷೇತ್ರದಲ್ಲಿ ನಡೆಯುತ್ತದೆ. ಸುರೇಶ್ ಗೌಡರದ್ದು ಏನು ನಡೆಯುತ್ತಿಲ್ಲ ಎಂದು ಯುವ ಕಾರ್ಯಕರ್ತರು ಈ ವೇಳೆ ದೂರು ನೀಡಿದರು.

Leave a Reply

Your email address will not be published. Required fields are marked *