Connect with us

Districts

ರಾಯಚೂರಿನಲ್ಲಿ ಮದ್ಯ ಮಾರಾಟ ಇಳಿಮುಖ – ಮದ್ಯಕ್ಕೂ ತಟ್ಟಿತು ಭೀಕರ ಬರಗಾಲ!

Published

on

ರಾಯಚೂರು: ಜಿಲ್ಲೆಯಲ್ಲಿ ಏಕಾಏಕಿ ಕುಡುಕರ ಸಂಖ್ಯೆ ಇಳಿಮುಖವಾಗಿದ್ದು, ಯಾವುದೇ ಮದ್ಯದ ಅಂಗಡಿಗೆ ಹೋದರೂ ಮದ್ಯದ ಸ್ಟಾಕ್ ಹಾಗೇ ಉಳಿದಿದೆ. ಮೊದಲೆಲ್ಲಾ ಶೇ.100ಕ್ಕೆ 110 ರಷ್ಟು ಗುರಿ ಮುಟ್ಟುತ್ತಿದ್ದ ಅಬಕಾರಿ ಇಲಾಖೆ ಈ ಬಾರಿ ಅರ್ಧದಷ್ಟು ಮದ್ಯ ಮಾರಾಟ ಮಾಡಲು ಸಾಧ್ಯವಾಗಿಲ್ಲ.

ಹೌದು. ಬಿಸಿಲನಾಡು ರಾಯಚೂರಿನಲ್ಲಿ ಏನಿಲ್ಲವೆಂದರೂ ಕುಡುಕರ ಸಂಖ್ಯೆಗೇನು ಕಮ್ಮಿಯಿಲ್ಲ. ಆದ್ರೆ ಈ ವರ್ಷ ಅದ್ಯಾಕೋ ಮದ್ಯವ್ಯಸನಿಗಳು ಕುಡಿಯುವುದನ್ನೇ ಕಡಿಮೆ ಮಾಡಿದ್ದಾರೆ. ಹೀಗಾಗಿ ಅಬಕಾರಿ ಇಲಾಖೆಯ ಮದ್ಯದ ಸ್ಟಾಕ್ ಹಾಗೇ ಉಳಿದಿದೆ.

ಮದ್ಯ ಮಾರಾಟದ ಪ್ರಮಾಣ ಕಡಿಮೆಯಾಗಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಆದ್ರೆ ಜಿಲ್ಲೆಗೆ ಕಾಡುತ್ತಿರುವ ಭೀಕರ ಬರಗಾಲದ ಪ್ರಭಾವ ಸಾಮಾನ್ಯ ಜನರ ಮೇಲೆ ಯಾವೆಲ್ಲಾ ರೀತಿ ಪರಿಣಾಮಗಳನ್ನ ಬೀರಿದೆ ಅನ್ನೊದಕ್ಕೆ ಇದೊಂದು ಉದಾಹರಣೆಯಾಗಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ಅತ್ಯಂತ ಕಡಿಮೆ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆಗೆ ನೀಡಲಾಗಿದ್ದ ಟಾರ್ಗೆಟ್‍ನಲ್ಲಿ ಕೇವಲ ಶೇ.58.90 ರಷ್ಟು ಮದ್ಯ ಮಾರಾಟವಾಗಿದೆ. ಅಂದರೆ 1,55,837 ಮದ್ಯದ ಕೇಸ್‍ಗಳಲ್ಲಿ ಕೇವಲ 91,785 ಕೇಸ್‍ಗಳು ಮಾತ್ರ ಮಾರಾಟವಾಗಿವೆ.

ಈ ಹಿಂದೆ 2018 ಮೇ-ಜೂನ್ ನಲ್ಲಿ ಅಬಕಾರಿ ಇಲಾಖೆ ಶೇ.106 ರಷ್ಟು ಮದ್ಯ ಮಾರಾಟ ಮಾಡಿತ್ತು. ಏಪ್ರಿಲ್ 2018ರಿಂದ ಈವರೆಗೆ ಶೇ.86.55 ರಷ್ಟು ಮಾತ್ರ ಮದ್ಯ ಮಾರಾಟವಾಗಿದ್ದು, ಮದ್ಯ ಮಾರಾಟದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಜಿಲ್ಲೆಯಲ್ಲಿನ ಭೀಕರ ಬರಗಾಲ ಹಾಗೂ ಲೋಕಸಭಾ ಚುನಾವಣೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಜಿಲ್ಲೆಗೆ ಕಾಡುತ್ತಿರುವ ಬರಗಾಲದಿಂದಾಗಿ ಸುಮಾರು 60 ಗ್ರಾಮಗಳ ಸಾವಿರಾರು ರೈತರು, ಕೂಲಿ ಕಾರ್ಮಿಕರು ಗುಳೆ ಹೋಗಿದ್ದಾರೆ. ಹೀಗಾಗಿ ಪಟ್ಟಣ, ಹೋಬಳಿ ಮಟ್ಟದಲ್ಲಿ ಮದ್ಯದ ಮಾರಾಟ ಇಳಿಮುಖವಾಗಿದೆ. ಇನ್ನೂ ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಲೋಕಸಭಾ ಚುನಾವಣೆಯಿದ್ದರೂ ಹೆಚ್ಚು ಮದ್ಯ ಓಡಾಡಿಲ್ಲ. ಹೀಗಾಗಿ ಮದ್ಯದ ವ್ಯಾಪಾರ ಕಡಿಮೆಯಾಗಿದೆ. ಚುನಾವಣೆ ವೇಳೆಗೂ ಮುನ್ನ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಪರವಾನಿಗೆ ಅಮಾನತ್ತಿನಲ್ಲಿಡಲಾಗಿದ್ದ ಹಾಗೂ ಪರವಾನಿಗೆ ರದ್ದು ಮಾಡಲಾಗಿದ್ದ ಜಿಲ್ಲೆಯ 37 ಮದ್ಯದಂಗಡಿಗಳನ್ನ ಪುನಃ ಆರಂಭಿಸಲು ಈಗ ಅನುವು ಮಾಡಿಕೊಡಲಾಗಿದೆ. ಆದರೂ ಕೂಡ ಮದ್ಯ ಮಾರಾಟದ ಪ್ರಮಾಣ ಮೊದಲ ಸ್ಥಿತಿಗೆ ಬಂದಿಲ್ಲ.