Saturday, 25th May 2019

Recent News

ಗ್ರಾಮಲೆಕ್ಕಾಧಿಕಾರಿ ಹತ್ಯೆ ಪ್ರಕರಣ: ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆಂದ ಲಿಂಗಸುಗೂರು ಶಾಸಕ

ರಾಯಚೂರು: ಗ್ರಾಮಲೆಕ್ಕಾಧಿಕಾರಿಯ ಹತ್ಯೆಯಲ್ಲ ಅದು ಅಸಹಜ ಸಾವಾಗಿದ್ದು, ಅವರು ಕಾಲು ಜಾರಿ ಮೃತಪಟ್ಟಿದ್ದಾರೆಂದು ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ಮಾನ್ವಿಯ ಬುರಾಂಪುರದಲ್ಲಿ ಮರಳು ಲಾರಿ ಹರಿದು ಗ್ರಾಮಲೆಕ್ಕಾಧಿಕಾರಿ ಸಾವನ್ನಪ್ಪಿದ ಪ್ರಕರಣದಲ್ಲಿ ದೊಡ್ಡ ದೊಡ್ಡ ಕೈಗಳಿರುವ ಶಂಕೆ ವ್ಯಕ್ತವಾಗಿದೆ. ಮರಳು ದಂಧೆಕೋರರಿಗೆ ಕಾಂಗ್ರೆಸ್ ಶಾಸಕರ ಬೆಂಬಲ ಇರುವ ಬಗ್ಗೆ ಅನುಮಾನಗಳು ಮೂಡಿವೆ. ಕೊಲೆ ಪ್ರಕರಣ ದಾಖಲಾಗಿದ್ದರೂ, ಶಾಸಕ ಹೂಲಗೇರಿ ಮಾತ್ರ ಇದು ಕೊಲೆಯಲ್ಲ. ಉದ್ದೇಶಪೂರ್ವಕವಾಗಿಯೇ ಕೊಲೆ ಎಂದು ಬಿಂಬಿಸಲಾಗುತ್ತಿದೆ ಎಂದು ಹೇಳುವ ಮೂಲಕ ದಂಧೆಕೋರರರನ್ನು ರಕ್ಷಿಸುತ್ತಿದ್ದಾರೆಂಬ ಮಾತು ಈಗ ಕೇಳಿ ಬಂದಿದೆ.

ಲೆಕ್ಕಾಧಿಕಾರಿಯ ಹತ್ಯೆ ಕುರಿತು ಮಾತನಾಡಿದ್ದ ಅವರು, ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಅವರದ್ದು ಅಸಹಜ ಸಾವು ಎನ್ನುವ ಮಾಹಿತಿಯಿದೆ. ಮರಳು ಲಾರಿ ತಡೆಯಲು ಹೋದಾಗ ಲಾರಿ ಮುಂದಕ್ಕೆ ಹೋಗಿದೆ. ಈ ವೇಳೆ ಕಾಲು ಜಾರಿ ಹಿಂದಿನ ಗಾಲಿಗೆ ಬಿದ್ದು ಅಧಿಕಾರಿ ಸಾವನ್ನಪ್ಪಿದ್ದಾನೆಂದು ಹೇಳಿದ್ದಾರೆ.

ಈಗಾಗಲೇ ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಅಕ್ರಮ ಮರಳುಗಾರಿಕೆಯ ಕಿಂಗ್‍ಪಿನ್ ಎಂದು ಹೇಳಲಾಗುತ್ತಿರುವ ಆಲ್ದಾಳ ವೀರಭದ್ರಪ್ಪ ಕಾಂಗ್ರೆಸ್ ಮುಖಂಡನಾಗಿದ್ದು, ಆತನನ್ನ ರಕ್ಷಿಸಲು ಶಾಸಕರು ಮುಂದಾಗಿದ್ದಾರೆ. ಅಲ್ಲದೇ ಶಾಸಕರು ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಸ್ಥಳೀಯ ಹೋರಾಟಗಾರರು ಆರೋಪಿಸಿದ್ದಾರೆ. ಶಾಸಕ ಬೇಜವಾಬ್ದಾರಿ ಹೇಳಿಕೆಯ ವಿರುದ್ಧ ಹೋರಾಟದ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ಏನಿದು ಪ್ರಕರಣ?
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಚೀಕಪರ್ವಿಯಲ್ಲಿ ಸಾಹೇಬ್ ಪಟೇಲ್ ಗ್ರಾಮಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶುಕ್ರವಾರ ಮಾನ್ವಿಯ ಬುದ್ದಿನ್ನಿ ಸಮೀಪದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಎನ್ನುವ ಮಾಹಿತಿ ಪಡೆದಿದ್ದರು. ಇದರ ಸಂಬಂಧ ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಲಾರಿ ಚಾಲಕನೊಬ್ಬ ಅಧಿಕಾರಿಯನ್ನು ನೋಡುತ್ತಿದ್ದಂತೆ, ಅವರಿಂದ ತಪ್ಪಿಸಿಕೊಳ್ಳಲು ಸಾಹೇಬ್ ಪಟೇಲ್ ಮೇಲೆಯೇ ಲಾರಿ ಹರಿಸಿದ್ದ. ಪರಿಣಾಮ ಎರಡೂ ಕಾಲುಗಳು ಮೇಲೆ ಲಾರಿ ಹರಿದು ತೀವ್ರ ಸ್ವರೂಪದ ರಕ್ತಸ್ರಾವವಾಗಿತ್ತು. ಇದನ್ನು ಕಂಡ ಸ್ಥಳೀಯರು ಕೂಡಲೇ ಪಟೇಲ್ ಅವರನ್ನು ಮಾನ್ವಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿಸಿದ್ದರು. ಆದರೆ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೇ ಪಟೇಲ್ ಮೃತಪಟ್ಟಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *