Crime
ಬೆಂಗಳೂರಲ್ಲಿ ಹವಾ ಸೃಷ್ಟಿಸಲು ರೌಡಿಶೀಟರ್ ಕೊಲೆ ಮಾಡಿದ್ದ 12 ಆರೋಪಿಗಳ ಬಂಧನ

ಹಾಸನ: ಬೆಂಗಳೂರಿನಲ್ಲಿ ಹವಾ ಮೇಂಟೇನ್ ಮಾಡಲು ರೌಡಿ ಶೀಟರ್, ರಿಯಲ್ ಎಸ್ಟೇಟ್ ಉದ್ಯಮಿ ಲಿಂಗರಾಜುನನ್ನು ಕೊಲೆ ಮಾಡಿದ್ದ 12 ಜನ ಆರೋಪಿಗಳನ್ನು ಹಾಸನದ ಹಿರೀಸಾವೆ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 8ರಂದು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಮವರಳ್ಳಿ ಗ್ರಾಮದ ತೋಟದ ಮನೆಯಲ್ಲಿ ಲಿಂಗರಾಜು ಕೊಲೆ ಮಾಡಲಾಗಿತ್ತು. ಲಿಂಗರಾಜು ಬೆಂಗಳೂರಿನ ಶಾಂತಿನಗರದಲ್ಲಿ ವಾಸವಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ. ಜೊತೆಗೆ ರೌಡಿಶೀಟರ್ ಕೂಡ ಆಗಿದ್ದ. ಲಾಕ್ಡೌನ್ ನಂತರ ತನ್ನ ಸ್ವಗ್ರಾಮ ಕಮವರಳ್ಳಿಗೆ ಬಂದು ತೋಟದ ಮನೆಯಲ್ಲಿ ವಾಸವಾಗಿದ್ದ. ಈ ವಿಷ್ಯ ತಿಳಿದ ಡಬಲ್ ಮೀಟರ್ ಮೋಹನ್, ನಾಗ ಸೇರಿದಂತೆ 16 ಜನರ ತಂಡ ಬೆಂಗಳೂರಿನಲ್ಲಿ ರೌಡಿಸಂನಲ್ಲಿ ಯಾರು ದೊಡ್ಡವರು ಎಂದು ತೋರಿಸಲು ಮತ್ತು ಹಳೇ ದ್ವೇಷದಿಂದ ಲಿಂಗರಾಜುನನ್ನು ಕೊಲೆ ಮಾಡಲು ನಿರ್ಧರಿಸಿದ್ದರು.
ಅದರಂತೆ ಲಿಂಗರಾಜುನನ್ನು ಕಮವರಳ್ಳಿಯ ತೋಟದ ಮನೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಸಾಕ್ಷ್ಯ ನಾಶಪಡಿಸುವ ಸಲುವಾಗಿ ಸಿಸಿಟಿವಿ, ಡಿವಿಆರ್ನ್ನೂ ಹೊತ್ತೊಯ್ದಿದ್ದರು. ಇದೀಗ ಹಾಸನ ಪೊಲೀಸರು 12 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳೆಲ್ಲ ಕೊಲೆ ಸೇರಿದಂತೆ ಇನ್ನಿತರ ಹಲವು ಕೃತ್ಯಗಳಲ್ಲಿ ಈ ಹಿಂದೆಯೂ ಭಾಗಿಯಾಗಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳು, ಎರಡು ಕಾರ್, ಒಂದು ಬೈಕನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಕೃತ್ಯದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆ ಸಂಬಂಧ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
