Connect with us

Cricket

ನಾಲ್ಕು ಬಾಲ್‍ನಲ್ಲಿ 4 ವಿಕೆಟ್ ಪಡೆದ ಮಾಲಿಂಗ ವಿಶ್ವದಾಖಲೆ

Published

on

ಕೊಲಂಬೊ: ಶ್ರೀಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ ಅವರು ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಪಡೆದು ಚುಟುಕು ಪಂದ್ಯದಲ್ಲಿ ಹೊಸ ದಾಖಲೆ ಮಾಡಿದ್ದಾರೆ.

ಶುಕ್ರವಾರ ಪಲ್ಲಕೆಲೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಟಿ-20 ಪಂದ್ಯದಲ್ಲಿ, ಲಸಿತ್ ಮಾಲಿಂಗ ಮ್ಯಾಚ್‍ನ ಮೂರನೇ ಓವರ್ ನಲ್ಲಿ ಕಿವೀಸ್‍ನ ನಾಲ್ಕು ಆಟಗಾರರನ್ನು ಒಂದೇ ಓವರ್ ನಲ್ಲಿ ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಪಂದ್ಯದ ಮೂರನೇ ಓವರ್ ಬೌಲ್ ಮಾಡಲು ಬಂದ ಮಾಲಿಂಗ್ ಆ ಓವರ್ ನ ಮೂರನೇ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಕೊಲಿನ್ ಮುನ್ರೊವನ್ನು ಬೌಲ್ಡ್ ಮಾಡುವ ಮೂಲಕ ಮೊದಲ ವಿಕೆಟ್ ಪಡೆದರು. ನಂತರ 4 ನೇ ಎಸೆತದಲ್ಲಿ ಹಮೀಶ್ ರುದರ್‍ಫೋರ್ಡ್ ಅವರನ್ನು ಎಲ್‍ಬಿಡಬ್ಲ್ಯು ಬಲೆಗೆ ಬೀಳಿಸಿದರು. ನಂತರ ಬಂದ ಕಾಲಿನ್ ಡಿ ಗ್ರ್ಯಾಂಡ್‍ಹೋಮ್ ಮಾಲಿಂಗ್ ಅವರ 5ನೇ ಎಸೆತದಲ್ಲಿ ಬೌಲ್ಡ್ ಆದರು. ಓವರ್ ನ ಕೊನೆಯ ಬಾಲ್‍ನಲ್ಲಿ ಅನುಭವಿ ಆಟಗಾರ ರಾಸ್ ಟೇಲರ್‍ ರನ್ನು ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದರು.

https://twitter.com/avulasunil/status/1169999036985643009

ಇದೇ ಪಂದ್ಯದಲ್ಲಿ ಇನ್ನೊಂದು ಸಾಧನೆ ಮಾಡಿರುವ ಲಸಿತ್ ಮಾಲಿಂಗ ಅವರು, ಕೊಲಿನ್ ಮುನ್ರೊ ಅವರನ್ನು 3 ನೇ ಎಸೆತದಲ್ಲಿ ಬೌಲ್ಡ್ ಮಾಡುವ ಮೂಲಕ ವಿಶ್ವದಲ್ಲೇ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ನೂರು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಖ್ಯಾತಿ ಪಡೆದರು. ಇವರನ್ನು ಬಿಟ್ಟರೆ ಈ ಪಟ್ಟಿಯಲ್ಲಿ 98 ವಿಕೆಟ್ ಪಡೆದ ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಎರಡನೇ ಸ್ಥಾನದಲ್ಲಿ ಇದ್ದಾರೆ.

ಒಂದೇ ಓವರ್ ನಲ್ಲಿ 4 ವಿಕೆಟ್ ಕಿತ್ತು ದಾಖಲೆ ಬರೆದ ಮಾಲಿಂಗ, ತಾನು ಬೌಲ್ ಮಾಡಿದ ಐದನೇ ಓವರ್‍ ನಲ್ಲಿ ಕೀವೀಸ್ ಆಟಗಾರ ಟಿಮ್ ಸೀಫರ್ಟ್ ಅವರನ್ನು ಔಟ್ ಮಾಡಿ 5 ವಿಕೆಟ್ ಪಡೆಯುವ ಮೂಲಕ ತನ್ನ ವೃತ್ತಿ ಜೀವನದಲ್ಲಿ ಟಿ-20 ಮಾದರಿಯಲ್ಲಿ ಎರಡು ಬಾರಿ ಒಂದು ಪಂದ್ಯದಲ್ಲಿ ಐದು ವಿಕೆಟ್ ಪಡೆದ ಸಾಧನೆ ಮಾಡಿದರು.

2006ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಮಾದರಿಗೆ ಮೊದಲು ಪಾದಾರ್ಪಣೆ ಮಾಡಿದ ಮಾಲಿಂಗ ಅವರು, ಇಲ್ಲಿಯವರೆಗೆ 76 ಟಿ-20 ಪಂದ್ಯಗಳನ್ನು ಆಡಿದ್ದು, 19.0 ಸರಾಸರಿಯಲ್ಲಿ ಒಟ್ಟು 104 ವಿಕೆಟ್ ಪಡೆದಿದ್ದಾರೆ. ಇದರ ಜೊತೆಗೆ 226 ಏಕದಿನ ಪಂದ್ಯಗಳನ್ನು ಆಡಿರುವ ಮಾಲಿಂಗ ಒಟ್ಟು 338 ವಿಕೆಟ್‍ಗಳನ್ನು ಪಡೆದಿದ್ದಾರೆ. ತನ್ನ ಡೆಡ್ಲಿ ಯಾರ್ಕರ್ ಮೂಲಕ ಹೆಸರುವಾಸಿಯಾಗಿರುವ ಮಾಲಿಂಗ 30 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 101 ವಿಕೆಟ್ ಪಡೆದು ಮಿಂಚಿದ್ದಾರೆ.

ಶುಕ್ರವಾರ ಪಲ್ಲಕೆಲೆಯಲ್ಲಿ ನಡೆದ ಅಂತಿಮ ಟಿ-20 ಪಂದ್ಯದಲ್ಲಿ ಲಸಿತ್ ಮಾಲಿಂಗ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲೆಂಡ್ ಶ್ರೀಲಂಕಾ ನೀಡಿದ 125 ರನ್‍ಗಳ ಸಾಧಾರಣ ಗುರಿ ಬೆನ್ನಟ್ಟಲಾಗದೆ 88 ರನ್‍ಗಳಿಗೆ ಆಲ್‍ಔಟ್ ಆಯಿತು. ಈ ಮೂಲಕ ಈ ಪಂದ್ಯವನ್ನು 37 ರನ್‍ಗಳ ಅಂತರದಿಂದ ಶ್ರೀಲಂಕಾ ಗೆದ್ದುಕೊಂಡಿತು.