ಮದ್ವೆಯಾದ 6 ತಿಂಗ್ಳಿಗೆ ಲಾಲು ಪುತ್ರನಿಂದ ವಿಚ್ಛೇದನಕ್ಕೆ ಅರ್ಜಿ

ಪಾಟ್ನಾ: ಮದುವೆಯಾದ ಆರು ತಿಂಗಳಲ್ಲೇ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ವಿಚ್ಛೇದನಕ್ಕಾಗಿ ಶುಕ್ರವಾರ ಪಾಟ್ನಾದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಆರು ತಿಂಗಳ ಹಿಂದೆಯಷ್ಟೇ ತೇಜ್ ಪ್ರತಾಪ್ ಯಾದವ್ ಅವರು ಬಿಹಾರದ ಮಾಜಿ ಸಚಿವರ ಪುತ್ರಿ ಐಶ್ವರ್ಯಾ ರೈ ಅವರನ್ನು ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಐಶ್ವರ್ಯಾ ರೈ ಮತ್ತು ಅವರ ಪೋಷಕರು ತೇಜ್ ಪ್ರತಾಪ್ ಯಾದವ್ ರ ತಾಯಿ ರಾಬ್ರಿ ದೇವಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಹುಕೋಟಿ ಮೇವು ಹಗರಣದಲ್ಲಿ ಆರ್ ಜೆಡಿ ಮುಖ್ಯಸ್ಥರಾದ ಲಾಲು ಪ್ರಸಾದ್ ಯಾದವ್ ರಾಂಚಿಯ ಜೈಲಿನಲ್ಲಿದ್ದಾರೆ. ಸದ್ಯಕ್ಕೆ ವಿಚ್ಛೇದನ ಅರ್ಜಿಯನ್ನು ಹಿಂತೆಗೆದುಕೊಳ್ಳುವ ಪ್ರಯತ್ನಗಳು ನಡೆದಿವೆ ಎಂದು ಸಂಬಂಧಿಗಳು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ತೇಜ್ ಪ್ರತಾಪ್ ಯಾದವ್ ವಿಚ್ಛೇದನ ಅರ್ಜಿಯೊಂದಿಗೆ ನ್ಯಾಯಾಲಯಕ್ಕೆ ಹೋಗಿದ್ದರು. ಆದರೆ ಅಂದು ತಾಂತ್ರಿಕದೋಷದ ಕಾರಣಗಳಿಂದಾಗಿ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಆದರೆ ಈ ಬಗ್ಗೆ ಲಾಲು ಪ್ರಸಾದ್ ಯಾದವ್ ಕುಟುಂಬದ ಸದಸ್ಯರೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಈ ಬಗ್ಗೆ ತೇಜ್ ಪ್ರತಾಪ್ ಯಾದವ್ ಅವರ ವಕೀಲ ಯಶವಂತ್ ಕುಮಾರ್ ಶರ್ಮಾ ಮಾತನಾಡಿ, ಇಬ್ಬರ ನಡುವೆ ಸಾಂಸರಿಕ ಜೀವನ ಚೆನ್ನಾಗಿರಲಿಲ್ಲ ಎಂದು ದೃಢಪಡಿಸಿದ್ದಾರೆ. ಜೊತೆಗೆ ತೇಜ್ ಪ್ರತಾಪ್ ಯಾದವ್ ಅವರ ಪರವಾಗಿ ಹಿಂದೂ ಮದುವೆ ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದನ್ನು ಬಿಟ್ಟು ಈ ಸಂದರ್ಭದಲ್ಲಿ ಬೇರೆ ಯಾವುದನ್ನೂ ಹೇಳಲಾರೆ ಅಂತ ತಿಳಿಸಿದ್ದಾರೆ.

ತೇಜ್ ಪ್ರತಾಪ್ ಪತ್ನಿ ಐಶ್ವರ್ಯ ತಂದೆ ಕೂಡಾ ಹಾಲಿ ಆರ್ ಜೆಡಿ ಶಾಸಕರಾಗಿದ್ದಾರೆ. ತೇಜ್ ಪ್ರತಾಪ್ ಯಾದವ್ ಮೇ 12 ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ಮದುವೆಗೆ ಸುಮಾರು 10,000ಕ್ಕೂ ಹೆಚ್ಚಿನ ಅತಿಥಿಗಳು ಹಾಜರಿದ್ದರು.

ಇತ್ತೀಚೆಗೆ ತೇಜ್ ಪ್ರತಾಪ್ ಯಾದವ್ ‘ರುದ್ರ: ದಿ ಅವತಾರ್” ಚಿತ್ರದ ಪೋಸ್ಟರ್ ಗಳನ್ನು ಟ್ವೀಟ್ ಮಾಡುವ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಾಗಿ ತಿಳಿಸಿದ್ದರು. ಎರಡು ವರ್ಷಗಳ ಹಿಂದೆ ಅಂದರೆ ಬಿಹಾರ ಕ್ಯಾಬಿನೆಟ್ ನಲ್ಲಿ ಸಚಿವರಾಗಿದ್ದಾಗ ಇವರು ಭೋಜ್ಪುರಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಲಾಲು ಯಾದವ್ ಅವರ 2ನೇ ಮಗ ತೇಜಶ್ವಿ ಯಾದವ್ ಅವಿವಾಹಿತರಾಗಿದ್ದು, ಇವರು ತಮ್ಮ ತಂದೆ ಬಂಧನಕ್ಕೊಳಗಾದ ಬಳಿಕ ಪಕ್ಷದ ಮುಖ್ಯಸ್ಥರಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *