– ‘ತೋಳ ಅಲ್ಲ, ಹುಲಿ’ಗೆ ರಿಯಲ್ ಟೆಸ್ಟ್
ಬೆಳಗಾವಿ: ಗೋಕಾಕ್ ಕ್ಷೇತ್ರದ ಉಪಸಮರದ ಕಾವು ಜೋರಾಗಿದ್ದು, ಕಾಂಗ್ರೆಸ್ನಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೇ ಅಥಣಿ ಕ್ಷೇತ್ರದ ಚುನಾವಣಾ ಜವಾಬ್ದಾರಿ ವಹಿಸಿಕೊಂಡಿದ್ದ ಹೆಬ್ಬಾಳ್ಕರ್ ಅವರು ಗೋಕಾಕ್ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ನೇರ ನೇರ ವಾಗ್ದಾಳಿ ನಡೆಸಿದ್ದ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ಕಾಂಗ್ರೆಸ್ನಲ್ಲಿ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡದಂತೆ ಷರತ್ತು ವಿಧಿಸಿದ್ದಾಗಿ ಹೇಳಿದ್ದರು. ಹೆಬ್ಬಾಳ್ಕರ್ ಅವರ ತೋಳ ಬಂತು ತೋಳ ಹೇಳಿಕೆಗೆ ತಿರುಗೇಟು ನೀಡಿ, ‘ಹುಲಿ ಬಂತು ಹುಲಿ’ ಎಂದು ಟಾಂಗ್ ನೀಡಿದ್ದರು.
ರಮೇಶ್ ಜಾರಕಿಹೊಳಿ ಅವರ ಹೇಳಿಕೆ ಬೆನ್ನಲ್ಲೇ ನೇರ ನೇರ ಸೆಡ್ಡು ಹೊಡೆಯಲು ಸಿದ್ಧತೆ ನಡೆಸಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಈ ಹಿಂದೆ ತಮಗೆ ನೀಡಲಾಗಿದ್ದ ಅಥಣಿ ಕ್ಷೇತ್ರದ ಜವಾಬ್ದಾರಿಯನ್ನು ತಿರಸ್ಕರಿಸಿ ಗೋಕಾಕ್ ಕ್ಷೇತ್ರದ ಉಸ್ತುವಾರಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಗೋಕಾಕ್ನಲ್ಲಿ ಠಿಕಾಣಿ ಹೂಡಿ ಕಾಂಗ್ರೆಸ್ ಪಕ್ಷ ಗೆಲುವಿಗಾಗಿ ಪಣ ತೊಟ್ಟಿದ್ದಾರೆ. ಸದ್ಯದ ಬೆಳವಣಿಗೆಯಿಂದ ಗೋಕಾಕ್ ಚುನಾವಣೆ ಮತ್ತಷ್ಟು ರಂಗೇರುವ ನಿರೀಕ್ಷೆ ಇದ್ದು, ಯಾರಿಗೆ ಗೆಲುವು ಲಭಿಸಲಿದೆ ಎಂಬುವುದನ್ನು ಕಾದು ನೋಡಬೇಕಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ನಡೆಗೆ ಪ್ರಮುಖ ಕಾರಣವೂ ಇದ್ದು, ಈ ಹಿಂದೆ ಹೆಬ್ಬಾಳ್ಕರ್ ಅವರು ಅಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾಗಿತ್ತು. ಅಲ್ಲದೇ ಸುಪ್ರೀಂ ಕೋರ್ಟ್ ಅನರ್ಹ ಶಾಸಕರ ಪ್ರಕರಣದ ಕುರಿತು ತೀರ್ಪು ನೀಡುತ್ತಿದಂತೆ ಸಿಎಂ ಬಿಎಸ್ವೈ ಅವರನ್ನು ಭೇಟಿ ಮಾಡಿ 20ಕ್ಕೂ ಹೆಚ್ಚು ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಅವರು, ಕ್ಷೇತ್ರದ ಅಭಿವೃದ್ಧಿ ಸಂಬಂಧ ಸಿಎಂ ಅವರನ್ನು ಭೇಟಿ ಮಾಡಿದ್ದಾಗಿ ತಿಳಿಸಿದ್ದರು. ವಿರೋಧಿಗಳು ಪದೇ ಪದೇ ತಮ್ಮ ಹೆಸರನ್ನು ಪ್ರಸ್ತಾಪ ಮಾಡುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದ ಹೆಬ್ಬಾಳ್ಕರ್ ಅವರು, ತಮ್ಮ ಮೇಲಿನ ಆರೋಪಗಳಿಗೆ ತಿರುಗೇಟು ನೀಡಲು ಗೋಕಾಕ್ ಉಸ್ತುವಾರಿಯನ್ನು ದೆಹಲಿ ನಾಯಕರಿಂದಲೇ ಪಡೆದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇತ್ತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಲಖನ್ ಜಾರಕಿಹೊಳಿ ಅವರಿಗೆ ನೀಡಲಾಗಿದ್ದು, ಸತೀಸ್ ಜಾರಕಿಹೊಳಿ ಅವರೊಂದಿಗೆ ಗೋಕಾಕ್ ಕ್ಷೇತ್ರದ ಉಸ್ತುವಾರಿಯನ್ನು ಹೆಬ್ಬಾಳ್ಕರ್ ಅವರು ಹೇಗೆ ನಿರ್ವಹಿಸಲಿದ್ದಾರೆ ಎಂಬುವುದು ಕುತೂಹಲ ಮೂಡಿಸಿದೆ.
ಇತ್ತ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಸೇರಿದಂತೆ ಕೇಂದ್ರ ಸಚಿವ ಸುರೇಶ್ ಅಂಗಡಿ, ಬಿಜೆಪಿ ಅಸಮಾಧಾನಿತ ಅಶೋಕ್ ಪೂಜಾರಿ ಅವರ ಮನವೊಲಿಕೆಗೆ ಯತ್ನಿಸಿದ್ದಾರೆ. ಅಲ್ಲದೇ ಮನವೊಲಿಕೆಯಲ್ಲಿ ಯಶಸ್ವಿಯಾಗಿದ್ದು, ತಮ್ಮ ಅಂತಿಮ ನಿರ್ಧಾರ ಹೇಳಲು ಭಾನುವಾರದ ವರೆಗೂ ಸಮಯವನ್ನು ನೀಡಿ ಎಂದು ಅಶೋಕ್ ಕೇಳಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.