Saturday, 25th May 2019

ಕದ್ದು ಸಾಗಿಸುತ್ತಿದ್ದ ಗೋವುಗಳನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಕುಮಟಾ ಪೊಲೀಸರು!

ಕಾರವಾರ: ಗೋವುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನವನ್ನು ಸಿನಿಮೀಯ ರೀತಿಯಲ್ಲಿ ವಶಪಡಿಸಿಕೊಂಡ ಘಟನೆ ಕುಮಟಾದ ಹಳಕಾರ್ ಹರಿಕಾಂತ್ರ ಕೇರಿ ಕ್ರಾಸ್‍ನಲ್ಲಿ ನಡೆದಿದೆ.

ಆರೋಪಿಗಳು ತಪ್ಪಿಸಿಕೊಂಡಿದ್ದು, ಮಾರುತಿ ಇಗ್ನೀಸ್ ಕಾರನ್ನು ವಶಕ್ಕೆ ಪಡೆದು, ಅದರಲ್ಲಿದ್ದ ಎರಡು ಆಕಳು ಹಾಗೂ ಒಂದು ಹೋರಿಯನ್ನು ಕುಮಟಾ ಠಾಣೆ ಪಿಎಸ್‍ಐ ಸಂಪತ್ ಕುಮಾರ್ ತಂಡ ರಕ್ಷಿಸಿದೆ.

ಶುಕ್ರವಾರ ಮುಂಜಾನೆ ರಿಜಿಸ್ಟರ್ ಆಗದ ಹೊಸ ಮಾರುತಿ ಇಗ್ನೀಸ್ ಕಾರಿನಲ್ಲಿ ಕಳ್ಳರು ಬಂದಿದ್ದರು. ಕುಮಟಾದ ಹರಕಾರ್ ನ ಹರಿಕಾಂತ್ರ ಕೇರಿಯಲ್ಲಿ ಹಸುಗಳನ್ನು ಕದ್ದು, ಕಾರಿನಲ್ಲಿ ಹಾಕಿಕೊಂಡು ಹೋಗುತ್ತಿದ್ದರು. ರಾತ್ರಿ ಪಾಳೆಯ ಗಸ್ತಿನಲ್ಲಿದ್ದ ಕುಮಟಾ ಠಾಣೆ ಪಿಎಸ್‍ಐ ಸಂಪತ್ ಕುಮಾರ್ ತಂಡವು ಇದನ್ನು ಗಮನಿಸಿ ಕಾರನ್ನು ಬೆನ್ನು ಹತ್ತಿದ್ದರು. ಆದರೆ ದಾರಿ ಮಧ್ಯದಲ್ಲಿ ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಅದರಲ್ಲಿದ್ದ ಎರಡು ಆಕಳು ಹಾಗೂ ಒಂದು ಹೋರಿಯನ್ನು ಅಲ್ಲಿಯೇ ಬಿಟ್ಟು ಕಳ್ಳರು ತಪ್ಪಿಸಿಕೊಂಡಿದ್ದಾರೆ.

ಸದ್ಯ ಪೊಲೀಸರು ಕಾರನ್ನು ತಮ್ಮ ವಶಕ್ಕೆ ಪಡೆದಿದ್ದು, ಹಸುಗಳನ್ನು ರಕ್ಷಿಸಿದ್ದಾರೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *