Saturday, 17th August 2019

ಯುವ ಆಟಗಾರರು ಅಧಿಕ ಹಣ ಪಡೆಯಲು ದ್ರಾವಿಡ್, ಕುಂಬ್ಳೆ, ಸಚಿನ್ ಕಾರಣ: ಸೆಹ್ವಾಗ್

ಮುಂಬೈ: ಭಾರತೀಯ ಕ್ರೀಡಾರಂಗದಲ್ಲಿ ಅಧಿಕ ಹಣ ಪಡೆಯುವ ಕ್ರೀಡಾಪಟುಗಳು ಎಂದರೆ ಕ್ರಿಕೆಟ್ ಆಟಗಾರರು ಎಂಬ ಸಂಗತಿ ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಕಳೆದ 2 ದಶಕಗಳ ಹಿಂದೆ ಇಂತಹ ಸ್ಥಿತಿ ಇರಲಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಸೆಹ್ವಾಗ್ ಹೇಳಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಸೆಹ್ವಾಗ್, ಇಂದಿನ ಯುವ ಕ್ರಿಕೆಟ್ ಆಟಗಾರರು ದ್ರಾವಿಡ್, ಕುಂಬ್ಳೆ, ಸಚಿನ್ ಅವರಿಗೆ ಕೃತಜ್ಞನೆ ಸಲ್ಲಿಸಬೇಕು. ಏಕೆಂದರೆ ಸದ್ಯ ಆಟಗಾರರು ಪಡೆಯುತ್ತಿರುವ ಹೆಚ್ಚಿನ ಹಣಕಾಸಿನ ಸೌಲಭ್ಯಕ್ಕೆ ಅವರೇ ಕಾರಣ ಎಂದು ತಿಳಿಸಿದ್ದಾರೆ.

ಅಂದು ದ್ರಾವಿಡ್, ಕುಂಬ್ಳೆ, ಸಚಿನ್ ಅವರು ಬಿಸಿಸಿಐ ತನ್ನ ಆದಾಯದಲ್ಲಿ ಆಟಗಾರರಿಗೆ ಪಾಲನ್ನು ನೀಡಬೇಕು ಎಂದು ಹೋರಾಟ ನಡೆಸಿದ್ದರು. 2001-02ರಲ್ಲೇ ಆಟಗಾರರ ಆರ್ಥಿಕ ಭದ್ರತೆಯ ಬಗ್ಗೆ ಆಸಕ್ತಿ ವಹಿಸಿ ಅವರು ತಮ್ಮ ಬಲವಾದ ವಾದವನ್ನು ಮುಂದಿಟ್ಟಿದ್ದರು. ಆದ್ದರಿಂದಲೇ ಸದ್ಯ ಆಟಗಾರರಿಗೆ ಹೆಚ್ಚಿನ ಸಹಾಯ ಲಭಿಸುತ್ತಿದೆ ಎಂದು ಹೇಳಿದ್ದಾರೆ.

ಇಂದು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಆಟಗಾರರು ಹಾಗೂ ಸಂಸ್ಥೆ ನಡುವೆ ಯಾವುದೇ ವಿವಾದ ಇಲ್ಲ. ಇದಕ್ಕೂ ಅವರ ದೂರದ ಚಿಂತನೆಯೇ ಕಾರಣವಾಗಿದೆ ಎಂದಿದ್ದಾರೆ. ಪ್ರೀಮಿಯರ್ ಕಬಡ್ಡಿ ಲೀಗ್ ಆಟಗಾರರಿಗೆ ಟೂರ್ನಿಯ ಆಯೋಜಕ ಸಂಸ್ಥೆಗಳು ಶೇ.20 ರಷ್ಟು ಆದಾಯವನ್ನು ಹಂಚಿಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ವೇಳೆ ಸೆಹ್ವಾಗ್ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೇ ಐಪಿಎಲ್ ಫ್ರಾಂಚೈಸಿಗಳು ಕೂಡ ತಮ್ಮ ಆದಾಯದ ಶೇ.20 ರಷ್ಟನ್ನು ಆಟಗಾರರಿಗೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದ ಪರ ಆಡುವ ವೇಳೆ ಹಾಕಿ ಆಟಗಾರರು ಕೇಲವ ಸರ್ಕಾರಿಂದ ಟಿಎ/ಡಿಎ ಗಳನ್ನು ಮಾತ್ರ ಪಡೆಯುತ್ತಾರೆ ಎಂಬುವುದರ ಬಗ್ಗೆ ಟೀಂ ಇಂಡಿಯಾ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಅವರ ಬಳಿ ಮಾತನಾಡುವ ವೇಳೆ ತಿಳಿದುಕೊಂಡಿದ್ದು, ಕ್ರಿಕೆಟ್, ಕಬ್ಬಡಿಯಂತೆ ಫುಟ್ಬಾಲ್ ಹಾಗೂ ಹಾಕಿಯಲ್ಲೂ ತೀರ್ಮಾನ ತೆಗೆದುಕೊಂಡರೆ ಆಟಗಾರರಿಗೆ ಅನುಕೂಲ ಆಗಲಿದೆ ಎಂದು ಸೆಹ್ವಾಗ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *