Connect with us

Bengaluru City

ಐದನೇ ದಿನವೂ ಮುಂದುವರಿದ ಸಾರಿಗೆ ನೌಕರರ ಮುಷ್ಕರ

Published

on

ಬೆಂಗಳೂರು: ಐದನೇ ದಿನವೂ ಸಾರಿಗೆ ನೌಕರರ ಮುಷ್ಕರ ಮುಂದುವರಿದಿದೆ. ಯುಗಾದಿ ಹಬ್ಬದ ಜೊತೆ ಸಾಲು ಸಾಲು ರಜೆ ಹಿನ್ನೆಲೆ ಜನರು ಊರುಗಳತ್ತ ಪ್ರಯಾಣಿಸಲು ಮುಂದಾಗಿದ್ದಾರೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗ್ತಿದೆ. ಆದರೆ ಬಸ್ ಸಿಗದ ಹಿನ್ನೆಲೆ ಪ್ರಯಾಣಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಆರಂಭವಾಗಿ 5 ದಿನ ಕಳೆದ್ರೂ ತಾರ್ಕಿಕ ಅಂತ್ಯ ಕಾಣುವ ಯಾವುದೇ ಸೂಚನೆ ಕಂಡು ಬಂದಿಲ್ಲ. ಇದರ ಮಧ್ಯೆ ಸರ್ಕಾರ ವಜಾ ಅಸ್ತ್ರ ಮುಂದುವರಿಸಿದೆ. ಮುಷ್ಕರದಲ್ಲಿ ಭಾಗಿಯಾಗಿರುವ ಬಿಎಂಟಿಸಿಯ 60 ಟ್ರೈನಿ ನೌಕರರು, 58 ಪ್ರೋಬೇಷನರಿ ಸಿಬ್ಬಂದಿ, ಸೇರಿ ಒಟ್ಟು 118 ನೌಕರರನ್ನು ಕೆಲಸದಿಂದ ವಜಾಗೊಳಿಸಿದೆ. ಕೆಎಸ್‍ಆರ್‍ಟಿಸಿ 141 ಜನರನ್ನ ವರ್ಗಾವಣೆ ಮಾಡಿದೆ. ಈ ಪೈಕಿ, ಚಿಕ್ಕಬಳ್ಳಾಪುರ, ಕೋಲಾರ ಸಾರಿಗೆ ವಿಭಾಗದ 36 ನೌಕರರನ್ನು ಮಂಗಳೂರು, ಪುತ್ತೂರಿಗೆ ವರ್ಗಾವಣೆ ಮಾಡಿದ ಇಲಾಖೆ ಆದೇಶ ಹೊರಡಿಸಿದೆ.

ಮುಷ್ಕರಕ್ಕೆ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದ ಹಾವೇರಿ ಡಿಪೋದ 17 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಇನ್ನು, ಬಂದ್‍ನ 4ನೇ ದಿನ 1,220 ಬಸ್‍ಗಳು ಸಂಚಾರ ನಡೆಸಿವೆ. ಕೆಎಸ್‍ಆರ್‍ಟಿಸಿಯ 597, ಬಿಎಂಟಿಸಿಯ 171, ಈಶಾನ್ಯ ಸಾರಿಗೆಯ 290, ವಾಯುವ್ಯ ಸಾರಿಗೆಯ 162 ಬಸ್ ಸಂಚಾರ ಮಾಡಿವೆ. ಸರ್ಕಾರಿ ಬಸ್‍ಗಳು ಬಂದ್ ಆಗಿರುವ ಹಿನ್ನೆಲೆ ಪರ್ಯಾಯವಾಗಿ ಖಾಸಗಿ ಬಸ್‍ಗಳನ್ನೇನೋ ರಸ್ತೆಗೆ ಇಳಿಸಲಾಗಿದೆ. ಆದ್ರೆ ಜನ ಇನ್ನು ಸಹ ಪ್ರೈವೇಟ್ ಬಸ್‍ಗಳ ಕಡೆ ಮುಖ ಮಾಡುತ್ತಿಲ್ಲ. ಹಲವು ಕಡೆ ಖಾಸಗಿ ಬಸ್‍ಗಳು ಹೆಚ್ಚು ದರ ವಿಧಿಸುತ್ತಿರೋದೆ ಇದಕ್ಕೆ ಕಾರಣವಾಗಿದೆ. ಕೆಲವು ಕಡೆ ಖಾಸಗಿಯವರ ಜೊತೆ ಪ್ರಯಾಣಿಕರು, ಮತ್ತೆ ಕೆಲವು ಕಡೆ ಸರ್ಕಾರಿ ಬಸ್‍ಗಳ ಜೊತೆ ಖಾಸಗಿಯವರು ವಾಗ್ವಾದ ನಡೆಸಿದ್ದಾರೆ.

Click to comment

Leave a Reply

Your email address will not be published. Required fields are marked *