Districts
ಮಳೆ, ಚಳಿ ಎಲ್ಲವನ್ನೂ ಒಂದೇ ರೀತಿಯಾಗಿ ಅನುಭವಿಸಿದ್ದೇನೆ: ಡಿಕೆಶಿ

– ಯಡಿಯೂರಪ್ಪ ಈ ಹಂತಕ್ಕೆ ಇಳೀತಾರೆ ಅಂದ್ಕೊಂಡಿರ್ಲಿಲ್ಲ
– ಮಗಳ ಎಂಗೇಜ್ಮೆಂಟ್ನಂದೇ ನೋಟಿಸ್ ಕೊಟ್ಟಿದ್ದಾರೆ
– ಕಾರ್ಯಕರ್ತರಲ್ಲಿ ಡಿಕೆಶಿ ಮನವಿಯೇನು?
ಕಲಬುರಗಿ: ಒಂದು ವರ್ಷದಿಂದ ಸುಮ್ಮನೆ ಇದ್ದವರು ನನ್ನ ಮನೆಯಲ್ಲಿ ಕಾರ್ಯಕ್ರಮ ಇದ್ದಾಗಲೇ ನೋಟಿಸ್ ಕೊಡಲು ಬಂದಿದ್ದಾರೆ. ನನಗೆ ಚಳಿ ಯಾವುದು, ಮಳೆ ಯಾವುದು ಗೊತ್ತಿಲ್ಲ. ಎಲ್ಲವನ್ನೂ ಒಂದೇ ರೀತಿಯಾಗಿ ಅನುಭವಿಸಿದ್ದೇನೆ. ನನ್ನ ಮೇಲೆ ಎಫ್ಐಆರ್ ಹಾಕಿದ್ದೇ ರಾಜಕೀಯ ಪ್ರೇರಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಬಿಐ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಮನೆಯಲ್ಲೆ ನನ್ನ ಮಗಳ ಎಂಗೆಜ್ಮೆಂಟ್ ಕಾರ್ಯಕ್ರಮ ಇದ್ದಾಗ ಮನೆ ಬಾಗಿಲಿಗೆ ಬಂದು ನೋಟಿಸ್ ಕೊಡ್ತಾರೆ. ನಾಳೆ ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗೋದಕ್ಕೆ ಹೊಗ್ತಿದ್ದೇನೆ. ನಮ್ಮ ಅಭಿಮಾನಿಗಳು ಕಾರ್ಯಕರ್ತರು ಯಾರೂ ಸಿಬಿಐ ಆಫಿಸ್ ಗೆ ಬರಬಾರದು. ಯಾರು ಕೂಡ ಹೇಳಿಕೆ ಕೊಡಬಾರದು ಎಂದು ಹೇಳುತ್ತಾ ಸಿಬಿಐ ಕಚೇರಿಗೆ ಬರದಂತೆ ಕಾರ್ಯಕರ್ತರ ಬಳಿ ಮನವಿ ಮಾಡಿಕೊಂಡರು.
ನಿಮಗೆ ಅವಮಾನ ಆಗುವ ಹಾಗೆ ನಾನು ನಡೆದುಕೊಂಡಿಲ್ಲ. ರಾಜಕಾರಣದ ದ್ವೇಷ ಉಕ್ಕಿ ಹರಿಯುತ್ತಿದೆ, ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ. ಸಾಮಾನ್ಯ ನಾಗರಿಕನಾಗಿ ಕಾನೂನಿನ ಚೌಕಟ್ಟಿನಲ್ಲಿಯೇ ಉತ್ತರ ಕೊಡುತ್ತೇನೆ. ಯಾವ ಶಾಸಕರ ಮೇಲೂ ಸಿಬಿಐ ತನಿಖೆಗೆ ಕೊಟ್ಟಿಲ್ಲ. ಬಿಜೆಪಿಯವರು ಕೇಂದ್ರ ಮತ್ತು ರಾಜ್ಯ ಸರ್ಕಾರ ದ್ವೇಷ ರಾಜಕಾರಣ ಮಾಡ್ತಿದ್ದಾರೆ. ಯಾರ ಆಸ್ತಿಯು ಹೆಚ್ಚಾಗಿಲ್ಲವಾ?, ಅವರು ಯಾರನ್ನು ಕೂಡ ಸಿಬಿಐ ತನಿಖೆ ಮಾಡೋದಕ್ಕೆ ಮುಂದಾಗಿಲ್ಲ. ನನ್ನ ಮಗಳ ನಿಶ್ಚಿತಾರ್ಥ ದಿನವೇ ನನ್ನ ಮನೆಯ ಬಾಗಿಲಿನಲ್ಲಿ ಬಂದು ನೋಟಿಸ್ ಕೊಡೋಕೆ ನಿಂತಿದ್ದಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಈ ಹಂತಕ್ಕೆ ಇಳಿಯುತ್ತಾರೆ ಅಂತ ಅಂದುಕೊಂಡಿರಲಿಲ್ಲ. ರಾಜಕಾರಣ ನೊಂದವರಿಗೆ ಸಹಾಯ ಮಾಡಬೇಕು. ಆದರೆ ಚುನಾವಣೆ ಬಂದಾಗ ಎಲ್ಲಾ ಜಾತಿಯವರಿಗೆ ಒಂದೊಂದು ಪ್ರಾಧಿಕಾರ ಕೊಡಿ. ಸಮಾಜ ಒಡೆಯುವ ಕೆಲಸ ಮಾಡ್ತಿದ್ದಾರೆ ಹಾಗಾದ್ರೆ ಬಜೆಟ್ ಯಾಕೆ ಬೇಕು ಎಂದು ಡಿಕೆಶಿ ಪ್ರಶ್ನಿಸಿದರು. ಇದೇ ವೇಳೆ ವಿಜಯೇಂದ್ರ ಹೇಳಿಕೆ ಪ್ರಸ್ತಾಪಿಸಿ, ಆರ್ ಆರ್ ನಗರದಲ್ಲಿ, ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ನಿಲ್ಲಿಸಿದ್ದಾರೆ. ಮುನಿರತ್ನ ಏನು ಬಿಜೆಪಿ ಕಾರ್ಯಕರ್ತನಾ? ಅವರು ಹೇಗೆ ಕಾಂಗ್ರೆಸ್ಸಿನಿಂದ ಕರೆತಂದು ನಿಲ್ಲಿಸಿಲ್ಲವಾ ಎಂದು ಗಂ ಆದರು.
ವಿಜಯನಗರದಿಂದ ವಿಜಯ ಸ್ಥಾಪನೆ ಮಾಡಬೇಕು ಅಂತ ಪ್ರವಾಸ ಆರಂಭ ಮಾಡಿದ್ದೇನೆ. ಯುವಕರು ಮಹಿಳೆಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬರಮಾಡಿಕೊಂಡು ಬೆಂಬಲ ನೀಡ್ತಿದ್ದಾರೆ. ಮಸ್ಕಿಯಲ್ಲಿ 35 ಸಾವಿರಕ್ಕೂ ಹೆಚ್ಚು ಜನ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಷ್ಟು ದೊಡ್ಡ ಮಟ್ಟದಲ್ಲಿ ಜನರು ಕಾಂಗ್ರೆಸ್ ಸೇರ್ತಾರೆ ಅಂತ ನಾನು ನೀರಿಕ್ಷೆ ಮಾಡಿರಲಿಲ್ಲ. ನನ್ನ ರಾಜಕೀಯ ಅನುಭವದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇದೆ ದೊಡ್ಡ ಸೇರ್ಪಡೆ ಸಭೆಯಾಗಿದೆ. ಚುನಾವಣೆ ಬಂದಾಗ ಅನೇಕ ಸಚಿವರು ಹೋಗಿ ಆಶ್ವಾಸನೆ ಕೊಡ್ತಿದ್ದಾರೆ. ಒಂದೂವರೆ ವರ್ಷದಿಂದ ಏನು ಮಾಡೋಕೆ ಆಗದೆ ಇದ್ದು ಇವಾಗ ಆಶ್ವಾಸನೆ ಕೊಟ್ಟಿದ್ದಾರೆ ಎಂದು ಟಾಂಗ್ ನೀಡಿದರು.
