Wednesday, 13th November 2019

Recent News

ನೊಂದವರ ಹೊಟ್ಟೆ ಸೇರದೆ ಕೊಳೀತಿದೆ ದವಸ-ಧಾನ್ಯ

ಕೊಪ್ಪಳ: ರಾಜ್ಯದಲ್ಲಿ ನೆರೆ ಹಾವಳಿಗೆ ಜನರು ತತ್ತರಿಸಿ ಹೋಗಿದ್ದು, ತುತ್ತು ಅನ್ನಕ್ಕೂ ಪಡಬಾರದ ಕಷ್ಟಪಟ್ಟಿದ್ದಾರೆ. ಇವರ ಕಷ್ಟ ನೋಡಲಾಗದೆ ರಾಜ್ಯದ ಜನರ ಮನಮಿಡಿದು ಕೈಲಾದ ಸಹಾಯ ಮಾಡಿದ್ದರು. ದವಸಧಾನ್ಯ, ಉಡುಪುಗಳನ್ನ ನೀಡಿ ಸಹಾಯ ಹಸ್ತ ಚಾಚಿದ್ದರು. ಆದರೆ ಕೊಪ್ಪಳ ಜಿಲ್ಲೆಯಲ್ಲಿ ದಾನಿಗಳು ನೀಡಿದ ಆಹಾರಧಾನ್ಯ, ಉಡುಪುಗಳನ್ನ ನೆರೆ ಸಂತ್ರಸ್ತರಿಗೆ ತಪುಪಿಸದೇ ಅಧಿಕಾರಿಗಳು ಕಳ್ಳಾಟ ನಡೆಸಿದ್ದಾರೆ.

ಕೊಪ್ಪಳದ ಗಂಗಾವತಿಯಲ್ಲಿ ಸಂಗ್ರಹ ಮಾಡಿರೋ ಆಹಾರ ಧಾನ್ಯಗಳು ಸಂತ್ರಸ್ತರಿಗೆ ಸೇರುತ್ತಿಲ್ಲ. ಅತ್ತ ಪ್ರವಾಹಕ್ಕೆ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ ಎಂದು ಜನರು ಕಂಗಾಲಾಗಿದ್ದಾರೆ. ಇತ್ತ ರಾಜ್ಯದ ಜನ ಕೈಲಾದ ಸಹಾಯ ಮಾಡಿ ಸಂತ್ರಸ್ತರ ನೆರವಿಗೆ ನಿಂತು ಆಹಾರ ಧಾನ್ಯ, ಅಗತ್ಯ ವಸ್ತುಗಳನ್ನು ಸಂಗ್ರಹ ಮಾಡಿ ಕಳುಹಿಸಿದ್ದರೂ ಅವು ನಿರಾಶ್ರಿತರಿಗೆ ತಲುಪಿಲ್ಲ. ಸಂಗ್ರಹಿಸಿದ ಆಹಾರ ಧಾನ್ಯ, ಅಗತ್ಯ ವಸ್ತುಗಳನ್ನು ನೊಂದವರಿಗೆ ತಲುಪಿಸದೆ ಅಧಿಕಾರಿಗಳು ಮಾತ್ರ ತಾಲೂಕು ಪಂಚಾಯ್ತಿಯ ಹಿಂದಿನ ಸಾಮಥ್ರ್ಯ ಸೌಧ ಕೊಠಡಿಯಲ್ಲಿ ಅವುಗಳನ್ನು ಶೇಖರಣೆ ಮಾಡಿಟ್ಟು, ಧೂಳು ಹಿಡಿಸುತ್ತಿದ್ದಾರೆ.

ಮೂರ್ನಾಲ್ಕು ತಿಂಗಳ ಹಿಂದೆ ನೂರಾರು ಕ್ವಿಂಟಾಲ್ ಅಕ್ಕಿ ಸಂಗ್ರಹವಾಗಿದೆ. ಉಡುಪುಗಳು ಹಾಸಿಗೆ, ಹೊದಿಕೆಗಳು ಕೂಡ ಜನ ಸಂತ್ರಸ್ತರಿಗೆ ನೀಡಿದ್ದಾರೆ. ಇತ್ತ ಜನ ನೆರೆ ಸಂತ್ರಸ್ತರಿಗೆ ನಾವು ನೀಡಿದ ಅಲ್ಪ ಸಹಾಯ ಮುಟ್ಟುತ್ತೆ ಅಂದುಕೊಂಡಿದ್ದರೆ ಇಲ್ಲಿನ ಅಧಿಕಾರಿಗಳು ಮಾತ್ರ ಇದಕ್ಕೆ ತಣ್ಣೀರೆರಚಿದ್ದಾರೆ. ಜೊತೆಗೆ, ಇಲ್ಲಿರೋ ಅಕ್ಕಿಯನ್ನು ಮಾರಿಕೊಳ್ಳುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬರುತ್ತಿದೆ.

ಚೇತರಿಸಿಕೊಳ್ಳಲಾಗದಷ್ಟರ ಮಟ್ಟಿಗೆ ಪ್ರವಾಹ ಬದುಕು ಕಸಿದಿದೆ. ಆದರೆ ಈ ನಡುವೆ ಅಧಿಕಾರಿಗಳ ನಿರ್ಲಕ್ಷ್ಯವೂ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನಾದರೂ ಈ ಬಗ್ಗೆ ಅಧಿಕಾರಿಗಳು ಗಮನವಹಿಸಿ, ಸಂತ್ರಸ್ತರಿಗೆ ಸೇರಬೇಕಾಗಿರುವ ಆಹಾರ ಧಾನ್ಯ, ವಸ್ತುಗಳನ್ನು ನೀಡಿ ಸಹಕರಿಸಬೇಕಿದೆ.

Leave a Reply

Your email address will not be published. Required fields are marked *