Connect with us

Districts

ಮಿರ್ಚಿ ಮಂಡಕ್ಕಿ ಸವಿದು ಖುಷಿಪಟ್ಟ ವಿಜಯೇಂದ್ರ

Published

on

ಕೊಪ್ಪಳ: ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಾಸ್ಸಾಗುತ್ತಿದ್ದಾಗ ಕೊಪ್ಪಳದಲ್ಲಿ ರಸ್ತೆ ಬದಿ ಮಿರ್ಚಿ ಮಂಡಕ್ಕಿ ಸವಿದು ಖುಷಿಪಟ್ಟಿದ್ದಾರೆ.

ಕೊಪ್ಪಳ ತಾಲೂಕಿನ ಬುದಗುಂಪಾ ಬಳಿ ರಸ್ತೆ ಬದಿ ಹೊಟೇಲ್ ಒಂದರಲ್ಲಿ ಕುಳಿತು ವಿಜಯೇಂದ್ರ ಮಿರ್ಚಿ ಮಂಡಕ್ಕಿ ರುಚಿ ಸವಿದರು. ಈ ಸಂದರ್ಭದಲ್ಲಿ ಕುರಿ ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಹಾಗೂ ಕರ್ನಾಟಕ ವಿದ್ಯುತ್ ನಿಗಮದ ಅಧ್ಯಕ್ಷ ತಮ್ಮೇಶ್ ಗೌಡ ಜೊತೆಗಿದ್ದರು.

ಈ ಮೊದಲು ಕೊಪ್ಪಳದ ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಮಾತನಾಡಿದ ವಿಜಯೇಂದ್ರ, ಶ್ರೀರಾಮನಿಗೆ ಜನ್ಮನೀಡಿದ ಪುಣ್ಯಭೂಮಿ ಅಯೋಧ್ಯೆಯಾದ್ರೆ, ಹನುಮನಿಗೆ ಜನ್ಮನೀಡಿದ ಅಂಜನಾದ್ರಿಯು ದಕ್ಷಿಣ ಭಾರತದ ಅಯೋಧ್ಯೆ ಎಂದು ಹೇಳಿದರು.

ನೂರಾರು ವರ್ಷಗಳ ಕಾಲ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಅನೇಕ ಹೋರಾಟಗಳು ನಡೆದವು. ಆ ಹೋರಾಟಗಳು ಯಾವವು ಯಶಸ್ವಿಯಾಗಿರಲಿಲ್ಲ. ಆದರೆ ಇಡೀ ಜಗತ್ತೆ ಮೆಚ್ಚಿದ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನೂರಾರು ವರ್ಷಗಳ ಕನಸು ಈಡೇರುತ್ತಿದೆ. ಸ್ವಾಭಿಮಾನ ಭಾರತದ ಕನಸು ಕಂಡ ಮೋದಿಯವರು ಒಂದು ಕಡೆಯಾದ್ರೆ, ನಾಡಿನ ಹಾಗೂ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಂಡಿರುವ ಕನಸು ಮತ್ತೊಂದೆಡೆ. ಆ ನಿಟ್ಟಿನಲ್ಲಿ ಇಬ್ಬರಿಗೂ ಏನೇ ತೊಂದರೆಗಳು ಬಂದರೂ ಅವುಗಳನ್ನು ಎದುರಿಸುವ ಶಕ್ತಿಯನ್ನು ಆ ಹನುಮಂತ ನೀಡಲಿ ಎಂದು ಪ್ರಾರ್ಥಿಸಿಕೊಂಡಿದ್ದೇನೆ ಎಂದರು.

ಇತ್ತಿಚೀನ ದಿನಗಳಲ್ಲಿ ಅಯೋಧ್ಯೆ ರಾಮಮಂದಿರ ಬಗ್ಗೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಲಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದರಿಂದಲೇ ಇಂದು ಅಲ್ಲಿ ಭವ್ಯಮಂದಿರ ನಿರ್ಮಾಣವಾಗುತ್ತಿದೆ. ಜೊತೆಗೆ ಯಾವುದೇ ಒತ್ತಾಯವಿಲ್ಲದೇ ಜನರಿಂದ ದೇಣಿಗೆಯನ್ನು ಸಂಗ್ರಹಿಸಲಾಗುತ್ತಿದೆ. ಆದರೇ ವಿರೋಧ ಪಕ್ಷದವರು ಬಾಯಿಗೆ ಬಂದಹಾಗೇ ಮಾತನಾಡುತ್ತಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಹೇಳಿಕೆಗಳು ಹಾಗೂ ನಡವಳಿಕೆಗಳಿಂದಲೇ ಇಂದು ದೇಶದಲ್ಲಿ ಕಾಂಗ್ರೆಸ್ ಪಕ್ಷವು ಅಡ್ರೆಸ್ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷವು ಇಲ್ಲದಂತ ಸನ್ನಿವೇಶ ನಿರ್ಮಾಣವಾಗಲಿದೆ. ಮುಂದಿನ ಬಸವ ಕಲ್ಯಾಣ, ಮಸ್ಕಿ, ಬೆಳಗಾವಿ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಜೊತೆಗೆ ರಾಜ್ಯದಲ್ಲಿ ನುಡಿದಂತೆ ನಡೆಯುವ ಎದೆಗಾರಿಕೆ ಇರುವುದು ಬಿ.ಎಸ್.ಯಡಿಯೂರಪ್ಪನವರಿಗೆ ಮಾತ್ರ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಇದೇ ವೇಳೆ ಬಿಎಸ್‍ವೈ ಅವರ ಉತ್ತರಾಧಿಕಾರಿ ವಿಜಯೇಂದ್ರ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದು ಪ್ರಾದೇಶಿಕ ಪಕ್ಷವಲ್ಲ, ಇದು ರಾಷ್ಟ್ರೀಯ ಪಕ್ಷ. ಪಕ್ಷಕ್ಕೆ ದುಡಿಯುವವರನ್ನು ಹಾಗೂ ಜನರ ಮನಸ್ಸನ್ನು ಯಾರು ಗೆಲ್ಲುತ್ತಾರೆ. ಯಾರಿಗೆ ಆ ಶಕ್ತಿ ಇದೆ ಎನ್ನುವುದನ್ನು ನೋಡಿ ನಮ್ಮ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ತೀರ್ಮಾನ ಮಾಡುತ್ತಾರೆ. ಮೀಸಲಾತಿ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಸಂವಿಧಾನದ ಅಡಿಯಲ್ಲಿ ಕಾನೂನಾತ್ಮಕವಾಗಿ ಏನೂ ಅವಕಾಶಗಳು ಇದೆ ಆ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ಮಾಡಿ ಪರಿಹಾರ ಒದಗಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದಿದ್ದಾರೆ ಎಂದು ಉತ್ತರಿಸಿದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ನಾಡನ್ನು ಕಟ್ಟುವಲ್ಲಿ, ಪಕ್ಷವನ್ನು ಬೆಳೆಸುವಲ್ಲಿ ಬಿ.ವೈ.ವಿಜಯೇಂದ್ರ ಅವರು ಶ್ರಮಿಸುತ್ತಿದ್ದಾರೆ. ಏನೇ ಟೀಕೆ ಟಿಪ್ಪಣಿಗಳು ಬಂದರೂ ಅವರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ರಾಮ ಎಂದ ಕ್ಷಣ ಹನುಮ ನೆನಪಾಗುತ್ತಾನೆ. ಅಯೋಧ್ಯೆಯಲ್ಲಿ ರಾಮನ ಮಂದಿರ ಹೇಗೆ ಅಭಿವದ್ಧಿ ಯಾಗುತ್ತದೆಯೋ ಹಾಗೇ ಅಂಜನಾದ್ರಿಯಲ್ಲಿ ಹನುಮನ ಮಂದಿರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅಭಿಪ್ರಾಯಪಟ್ಟರು.

Click to comment

Leave a Reply

Your email address will not be published. Required fields are marked *