Friday, 13th December 2019

ಪರ್ಸೆಂಟೆಜ್ ಕೊಡೋರಿಗೆ ಬೆಲೆ ಕೊಡ್ತಾರೆ – ತಮ್ಮದೇ ಶಾಸಕರ ವಿರುದ್ಧ ಬಿಜೆಪಿ ಕಾರ್ಯಕರ್ತರ ಕಿಡಿ

ಕೊಪ್ಪಳ: ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸುಗೂರು ವಿರುದ್ಧ ಬಿಜೆಪಿ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ ಪ್ರಸಂಗ ಕಾರಟಗಿಯಲ್ಲಿ ನಡೆದಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಜಯಗಳಿಸಿದ ಸಂಸದ ಕರಡಿ ಸಂಗಣ್ಣ ಅವರಿಗೆ ಬಿಜೆಪಿ ಕಾರ್ಯಕರ್ತರು ಅಭಿನಂದನಾ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ಸಂಸದ ಮುಂದೆ ಬಸವರಾಜ ದಡೇಸುಗೂರು ವಿರುದ್ಧ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚುನಾವಣೆಯಲ್ಲಿ ಕಾರ್ಯಕರ್ತರನ್ನು ಕತ್ತೆ ತರಾ ಕೆಲಸ ಮಾಡಿಸಿಕೊಂಡರು. ಗೆಲುವು ಸಾಧಿಸಿದ ನಂತರ ನಮ್ಮ ಮಾತುಗಳಿಗೆ, ಬೇಡಿಕೆಗಳಿಗೆ ಕ್ಯಾರೆ ಎನ್ನುತ್ತಿಲ್ಲ. ಶಾಸಕರಿಗೆ ಕೇವಲ ಪರ್ಸೆಂಟೆಜ್ ಕೊಡುವ ಗುತ್ತಿಗೆದಾರರು ಮಾತ್ರ ಬೇಕು. ಕನಕಗಿರಿಯಲ್ಲಿ ಬಿಜೆಪಿ ಕಾರ್ಯಕರ್ತರು ನಾಯಿಗಿಂತ ಕಡೆ ಆಗಿದ್ದಾರೆ. ಹಾಗಾದರೆ ನಿಜವಾದ ಬಿಜೆಪಿ ಕಾರ್ಯಕರ್ತರಿಗೆ ಇಲ್ಲಿ ಬೆಲೆ ಇಲ್ಲವೇ? ಯಾವುದೇ ಕಾರ್ಯಕ್ರಮ ನಡೆದರೂ ನಮಗೆ ತಿಳಿಸದೆ ಶಾಸಕರ ತಮ್ಮ ಕೆಲ ಬೆಂಬಲಿಗರೊಂದಿಗೆ ಮಾತ್ರ ಹೊಗುತ್ತಾರೆ ಎಂದು ಶಾಸಕ ಬಸವರಾಜ ದಡೇಸುಗೂರು ವಿರುದ್ಧ ಕಿಡಿಕಾರಿದರು.

ಈ ವೇಳೆ ಸಂಸದ ಕರಡಿ ಸಂಗಣ್ಣ ಅವರು ಅಸಮಾಧಾನ ಹೊರ ಹಾಕಿದ ಕಾರ್ಯಕರ್ತರ ಮನವೊಲಿಸಲು ಮುಂದಾದರು. ಆದರೆ ಇದಕ್ಕೆ ಕ್ಯಾರೆ ಎನ್ನದೆ ಕೆಲ ಕಾರ್ಯಕರ್ತರು ನಡು ರಸ್ತೆಯಲ್ಲಿಯೇ ಶಾಸಕರ ವಿರುದ್ಧ ಗುಡುಗಿದರು.

Leave a Reply

Your email address will not be published. Required fields are marked *