Wednesday, 29th January 2020

Recent News

ಮಧ್ಯಂತರ ಚುನಾವಣೆಯಿಂದ ಕುದುರೆ ವ್ಯಾಪಾರ, ಅನೈತಿಕ ವ್ಯವಹಾರಗಳು ನಿಲ್ಲುತ್ತೆ: ರಾಯರಡ್ಡಿ

ಕೊಪ್ಪಳ: ಮಧ್ಯಂತರ ಚುನಾವಣೆಗೆ ಹೋಗುವುದೇ ಒಳ್ಳೆಯದು, ಇದರಿಂದ ಕುದುರೆ ವ್ಯಾಪಾರ, ಅನೈತಿಕ ವ್ಯವಹಾರಗಳು ನಿಲ್ಲಲು ಸಾಧ್ಯ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಇಂದು ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರದ ಆಸೆಗಾಗಿ ಈ ರೀತಿ ರಾಜೀನಾಮೆ ಕೊಡೋದು ಸರಿಯಲ್ಲ ಇದು ನಿಲ್ಲಬೇಕು. ಶಾಸಕರು ತಲೆತಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರೆಂದರೆ ರಾಜ್ಯಕ್ಕೆ, ರಾಷ್ಟ್ರಕ್ಕೆ ಕಾನೂನು ಮಾಡುವಂತವರು. ಅವರೇ ಈ ರೀತಿ ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂದರೆ ಇದು ಶೇಮ್ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸೈದ್ಧಾಂತಿಕ ವಿಚಾರದಲ್ಲಿ ರಾಜೀನಾಮೆ ಕೊಟ್ಟರೆ ಸರಿ, ಅಧಿಕಾರಕ್ಕಾಗಿ ಈ ರೀತಿ ರಾಜೀನಾಮೆ ಕೊಟ್ಟರೆ ಶಾಸಕ ಸ್ಥಾನಕ್ಕೆ ಅಗೌರವ ತಂದುಕೊಟ್ಟಂತೆ ಎಂದು ಶಾಸಕರ ವಿರುದ್ಧ ಕಿಡಿಕಾರಿದರು. ಅದಕ್ಕಾಗಿ ಇದೆಲ್ಲ ನಿಲ್ಲಬೇಕೆಂದರೆ ಚುನಾವಣೆಗೆ ಹೋಗುವುದೇ ಸರಿ. ಮತದಾರರು ಕೂಡ ಒಂದು ಪಕ್ಷಕ್ಕೆ ಬಹುಮತ ಕೊಟ್ಟರೆ ಸರ್ಕಾರ ಸುಭದ್ರವಾಗಿ ನಡೆಸಲು ಸಾಧ್ಯವಾಗುತ್ತದೆ. ಇನ್ನೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಬಿಜೆಪಿಯವರು ವಾಮಮಾರ್ಗದಿಂದ ಇದನ್ನೆಲ್ಲ ಮಾಡಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಇದು ಬಿಜಿಪಿಯವರಿಗೂ ಒಳ್ಳೆಯದಲ್ಲ, ಅನಿವಾರ್ಯವಾಗಿ ಕಾಂಗ್ರೆಸ್ ಜೆಡಿಎಸ್ ಒಪ್ಪಂದ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದೇವೆ. ಅದರಲ್ಲಿ ಸಣ್ಣ ಪುಟ್ಟ ವೈಮನಸ್ಸುಗಳು ಇರುತ್ತವೆ. ಅದನ್ನು ನಮ್ಮ ಪಕ್ಷದಲ್ಲಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಶಾಸಕರು ಈ ರೀತಿ ನಡೆದುಕೊಳ್ಳೋದು ಸರಿ ಅಲ್ಲ, ನಮ್ಮ ಶಾಸಕರು ರಾಜೀನಾಮೆ ವಾಪಸ್ ಪಡೆಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *