Connect with us

Karnataka

ಡೀಸೆಲ್ ಇಂಜಿನ್‍ಗೆ ಬ್ರೇಕ್- 100 ಕೋಟಿ ಉಳಿಸಲಿದೆ ಕೊಂಕಣ ರೈಲ್ವೆ ಇಲಾಖೆ

Published

on

– ಕರಾವಳಿ ಭಾಗದ ವಿದ್ಯುದೀಕರಣ ಪೂರ್ಣ

ಕಾರವಾರ: ಕಳೆದ ಮೂರು ವರ್ಷಗಳಿಂದ 1,100 ಕೋಟಿ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದ ಕೊಂಕಣ ರೈಲು ಮಾರ್ಗದ ವಿದ್ಯುದೀಕರಣ ಕಾರ್ಯ ಭರದಿಂದ ಸಾಗಿತ್ತು. ಇದೀಗ ರಾಜ್ಯದಲ್ಲಿ ಕಾಮಗಾರಿ ಪೂರ್ಣಗೊಂದ್ದು, ತೋಕೂರಿನಿಂದ ಕಾರವಾರದವರೆಗೆ ಮೊದಲ ಬಾರಿ ನಡೆಸಿದ ವಿದ್ಯುತ್ ಚಾಲಿತ ಲೋಕೊದ (ಎಂಜಿನ್) ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ.

ಈ ಹಿಂದೆ ದಕ್ಷಿಣ ಕನ್ನಡದ ತೋಕೂರಿನಿಂದ ಉಡುಪಿ ಜಿಲ್ಲೆಯ ಬಿಜೂರುವರೆಗೆ ಸುಮಾರು 105 ಕಿಲೋಮೀಟರ್ ಮಾರ್ಗದ ವಿದ್ಯುದೀಕರಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿತ್ತು. ಇದೀಗ ಉತ್ತರ ಕನ್ನಡದಲ್ಲೂ ವಿದ್ಯುದೀಕರಣ ಸಂಪೂರ್ಣವಾಗಿದ್ದು, ಕೊಂಕಣ ರೈಲ್ವೆಯು ಲೋಕೋದ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿದೆ.

ಪರೀಕ್ಷಾರ್ಥ ಸಂಚಾರದಲ್ಲಿ ಗರಿಷ್ಠ 110 ಕಿಲೋಮೀಟರ್ ವೇಗದಲ್ಲೂ ಯಾವುದೇ ತಾಂತ್ರಿಕ ಸಮಸ್ಯೆಯಿಲ್ಲದೇ ಸಂಚರಿಸಿದ್ದು, ಯಾವುದೇ ಲೋಪದೋಷಗಳು ಕಂಡುಬಂದಿರದ ಕಾರಣ ಶೀಘ್ರದಲ್ಲಿ ಮಂಗಳೂರಿನಿಂದ ಕಾರವಾರದ ವರೆಗೆ ವಿದ್ಯುದೀಕರಣಗೊಂಡ ರೈಲುಗಳು ಸಂಚರಿಸುವ ಮೂಲಕ ಡೀಸೆಲ್ ಇಂಜಿನ್‍ಗೆ ಶಾಶ್ವತ ಮುಕ್ತಿ ದೊರೆಯಲಿದೆ. ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ರೋಹಾದಿಂದ ರತ್ನಗಿರಿವರೆಗಿನ ಮಾರ್ಗದಲ್ಲಿ ಮಾರ್ಚ್ 7ರಂದು ಯಶಸ್ವಿ ಪರೀಕ್ಷಾರ್ಥ ಸಂಚಾರ ಮಾಡಲಾಗಿತ್ತು. ಇತ್ತ ಗೋವಾದ ಮಡಗಾಂವ್‍ನಿಂದ ಮಹಾರಾಷ್ಟ್ರದ ಕರ್ಮಾಲಿವರೆಗಿನ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ.

ಇನ್ನು ಕಾರವಾರದಿಂದ ಗೋವಾ ಮಡಗಾಂವ್ ವರೆಗೆ ಜೂನ್ ತಿಂಗಳಲ್ಲಿ ವಿದ್ಯುದೀಕರಣ ಪೂರ್ಣ ಗೊಳ್ಳಲಿದೆ. ಇದರಿಂದ ಅತೀ ಹೆಚ್ಚು ಬಳಕೆಯಾಗುತಿದ್ದ ಡೀಸೆಲ್ ಇಂಧನದ ಖರ್ಚು ಉಳಿಯಲಿದ್ದು, ಇಲಾಖೆಗೆ ವರ್ಷಕ್ಕೆ 100 ಕೋಟಿ ರೂ. ಉಳಿತಾಯವಾಗಲಿದೆ ಎಂದು ಕ್ಷೇತ್ರಿಯ ರೈಲ್ವೆ ಪ್ರಬಂಧಕ ಬಾಳಾಸಾಹೇಬ್ ಬಿ.ನಿಕಮ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಕೊಂಕಣ ರೈಲ್ವೆ ಮಾರ್ಗವು ಒಟ್ಟು 756 ಕಿಲೋಮೀಟರ್ ಉದ್ದವಿದ್ದು, ಮಹಾರಾಷ್ಟ್ರದ ರೋಹಾದಿಂದ ಮಂಗಳೂರು ಸಮೀಪದ ತೋಕೂರಿನವರೆಗೆ ಚಾಚಿಕೊಂಡಿದೆ.

ಸಬ್ ಸ್ಟೇಷನ್‍ಗಳ ಸ್ಥಾಪನೆ ಪೂರ್ಣ
ರೈಲ್ವೆ ಮಾರ್ಗಕ್ಕೆ ಬೇಕಾಗುವ ವಿದ್ಯುತ್ ಪೂರೈಕೆಗೆ ಸಬ್ ಸ್ಟೇಷನ್‍ಗಳ ಸ್ಥಾಪನೆ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಇವೆ. ಕಾರವಾರ, ಮುರಡೇಶ್ವರ, ಸೇನಾಪುರ, ಬಾರ್ಕೂರು, ಮೂಲ್ಕಿಯಲ್ಲಿ ಸಬ್ ಸ್ಟೇಷನ್ ನಿರ್ಮಾಣವಾಗಿವೆ. ಇದೇ ರೀತಿ ಕೊಂಕಣ ರೈಲ್ವೆಯ ಮಾರ್ಗದುದ್ದಕ್ಕೂ ಸ್ಥಾಪನೆ ಮಾಡಲಾಗುತ್ತಿದೆ. ಈ ವರ್ಷ ಡಿಸೆಂಬರ್ ಒಳಗೆ ವಿದ್ಯುತ್ ಚಾಲಿತ ರೈಲುಗಳ ಸಂಚಾರ ಈ ಮಾರ್ಗದಲ್ಲಿ ಆರಂಭವಾಗುವ ನಿರೀಕ್ಷೆಯಿದೆ.

ಕರಾವಳಿಗರಿಗೆ ಹೆಚ್ಚಿನ ಲಾಭ
ವಿದ್ಯುದೀಕರಣ ಗೊಂಡ ರೈಲು ಸಂಚರಿಸುವುದರಿಂದ ಇಂಧನ ವೆಚ್ಚ ಅತೀ ಕಡಿಮೆಯಾಗಲಿದೆ. ಇದರಿಂದ ಹೆಚ್ಚು ರೈಲುಗಳನ್ನು ಓಡಿಸಲು ಸಹಾಯವಾಗಲಿದೆ. ಕರ್ನಾಟಕದ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಭಾಗವು ಉದ್ಯೋಗ, ಶಿಕ್ಷಣ, ವ್ಯಾಪಾರ, ಆರೋಗ್ಯ ಸಂಬಂಧ ಮಹಾರಾಷ್ಟ್ರ ಹಾಗೂ ಗೋವಾ ವನ್ನು ಅವಲಂಭಿಸಿದೆ. ಉದ್ಯೋಗಕ್ಕಾಗಿ ಪ್ರತಿ ದಿನ ಸಾವಿರಾರು ಜನ ಕಾರವಾರದಿಂದ ಗೋವಾಕ್ಕೆ ಸಂಚಾರ ಮಾಡುತ್ತಾರೆ. ಹೀಗಾಗಿ ಹೆಚ್ಚು ಉಪಯೋಗವಾಗಲಿದ್ದು, ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿ ಸಂಚರಿಸುವ ಹೈ ಸ್ಪೀಡ್ ರೈಲಿನಂತೆ ಈ ಭಾಗದಲ್ಲೂ ಮುಂದಿನ ದಿನದಲ್ಲಿ ಹೈ ಸ್ಪೀಡ್ ರೈಲು ಸಂಚರಿಸಲು ಸಹಾಯವಾಗಲಿದೆ.

Click to comment

Leave a Reply

Your email address will not be published. Required fields are marked *